ಅಮೇಥಿಯಲ್ಲಿ ಸ್ಮೃತಿ ಇರಾನಿಗೆ ಸೋಲು : ಕಿಶೋರಿ ಲಾಲ್ ಶರ್ಮಾಗೆ ಭರ್ಜರಿ ಗೆಲುವು
ಸುದ್ದಿಒನ್ : 2019ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ಉತ್ತರ ಪ್ರದೇಶದ ಭದ್ರಕೋಟೆ ಅಮೇಥಿಯನ್ನು ಕಾಂಗ್ರೆಸ್ ಪಕ್ಷ ಮತ್ತೆ ವಶಪಡಿಸಿಕೊಂಡಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ 1.4 ಲಕ್ಷ ಮತಗಳ ಬಹುಮತದಿಂದ
ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಇರಾನಿ ಅವರು ರಾಹುಲ್ ಗಾಂಧಿ ಅವರನ್ನು 50 ಸಾವಿರಕ್ಕೂ ಹೆಚ್ಚು ಮತಗಳ ಬಹುಮತದಿಂದ ಸೋಲಿಸಿ ಕಾಂಗ್ರೆಸ್ ಭದ್ರಕೋಟೆಯನ್ನು ವಶಪಡಿಸಿಕೊಂಡಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ವಾಪಸ್ಸು ಪಡೆದಿದೆ.
ಗಾಂಧಿ ಕುಟುಂಬದ ನಿಷ್ಠಾವಂತ ಕಿಶೋರಿಲಾಲ್ ಶರ್ಮಾ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಲಾಗಿತ್ತು. ಪಂಜಾಬ್ ನ ಲೂಧಿಯಾನ ಮೂಲದ ಕಿಶೋರಿಲಾಲ್ ಶರ್ಮಾ ಗಾಂಧಿ ಕುಟುಂಬಕ್ಕೆ ತುಂಬಾ ಆತ್ಮೀಯರು. ಅವರು ದಶಕಗಳಿಂದ ಅವರ ಕುಟುಂಬಕ್ಕೆ ಹತ್ತಿರವಾಗಿದ್ದಾರೆ. ಅವರು 1983 ರಲ್ಲಿ ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರೊಂದಿಗೆ ಅಮೇಥಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮರಣದ ನಂತರ, ಅವರು ಕುಟುಂಬದೊಂದಿಗೆ ಮತ್ತಷ್ಟು ಹತ್ತರವಾದರು. ಗಾಂಧಿ ಅನುಪಸ್ಥಿತಿಯಲ್ಲಿ ಅವರು ಅಮೇಥಿ ಮತ್ತು ರಾಯಬರೇಲಿ ಕ್ಷೇತ್ರಗಳ ಜವಾಬ್ದಾರಿಯನ್ನು ನೋಡಿಕೊಂಡರು. ಅಲ್ಲಿಯ ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತಿದ್ದರು. ಸೋನಿಯಾ ಗಾಂಧಿ ಮೊದಲ ಬಾರಿಗೆ ನೇರ ರಾಜಕೀಯಕ್ಕೆ ಕಾಲಿಟ್ಟ ನಂತರ ಅವರು ಅಮೇಠಿಗೆ ಹೋದಾಗ ಬಂದಾಗ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಅಮೇಠಿಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದಾಗಲೂ ಸಹಾ ಶರ್ಮಾ ಅವರಿಗೆ ಸಹಕಾರಿಯಾಗಿದ್ದರು.
ಶರ್ಮಾ ಅವರ ಗೆಲುವಿಗಾಗಿ ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಅಭಿನಂದಿಸಿದ್ದಾರೆ. 'ಕಿಶೋರಿ ಭಾಯ್... ನಿಮ್ಮ ಗೆಲುವು ಖಚಿತ ಎಂದು ನನಗೆ ಮೊದಲೇ ತಿಳಿದಿತ್ತು ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. 'ಕಿಶೋರಿ ಭಾಯ್, ಮೊದಲಿನಿಂದಲೂ ನಿಮ್ಮ ಗೆಲುವಿನ ಬಗ್ಗೆ ನನಗೆ ಅನುಮಾನವಿರಲಿಲ್ಲ. ನೀವು ಗೆಲ್ಲುತ್ತೀರೆಂದು ನಾನು ಹೇಳುತ್ತಲೇ ಇದ್ದೆ. ನಿಮಗೆ ಮತ್ತು ಅಮೇಥಿಯಲ್ಲಿರುವ ನನ್ನ ಸಹೋದರ ಸಹೋದರಿಯರಿಗೆ ಅಭಿನಂದನೆಗಳು ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.