ಮಾಲ್ ನಲ್ಲಿ ಕ್ರಿಸ್ ಮಸ್ ಹಬ್ಬದ ಅಲಂಕಾರ : ಗಲಾಟೆ ಮಾಡಿದ ಪುನೀತ್ ಕೆರೆಹಳ್ಳಿ ಮೇಲೆ ಎಫ್ಐಆರ್
ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆ ಎಂಬ ಸಂಘಟನೆ ಕಟ್ಟಿಕೊಂಡಿರುವ ಪುನೀತ್ ಕೆರೆಹಳ್ಳಿ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ರಾಜ್ಯದ ಎಲ್ಲೆಡೆ ಕ್ರಿಸ್ ಮಸ್ ಹಬ್ಬ ಜೋರಾಗಿದೆ. ಮಾಲ್ ಗಳಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ಅಲಂಕಾರ ಮಾಡಲಾಗಿದೆ. ಮಾಲ್ ನಲ್ಲಿ ಕ್ರಿಸ್ ಮಸ್ ಅಲಂಕಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆ ಮಾಡಿದ ಪ್ರಕರಣಕ್ಕೆ ಪುನೀತ್ ಕೆರೆಹಳ್ಳಿ ವಿರುದ್ಧ ದೂರು ದಾಖಲಾಗಿದೆ.
ಹೆಬ್ಬಾಳ ಸಮೀಪವಿರುವ ಮಾಲ್ ಆಫ್ ಏಷ್ಯಾಗೆ ನುಗ್ಗಿ ಗಲಾಟೆ ಮಾಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಮಾಲ್ ಗೆ ತನ್ನ ಸಂಗಡಿಗರೊಂದಿಗೆ ಪುನೀತ್ ಕೆರೆ ಹಳ್ಳಿ ಎಂಟ್ರಿ ಕೊಟ್ಟಿದ್ದು, ಯಾಕೆ ಕ್ರಿಸ್ ಮಸ್ ಟ್ರೀ ಅಲಂಕರಾ ಮಾಡಿದ್ದೀರಿ ಎಂದು ಅಲ್ಲಿನ ಮಾಲ್ ಸಿಬ್ಬಂದಿಯೊಂದಿಗೆ ಜಗಳಕ್ಕೆ ನಿಂತಿದ್ದಾರೆ. ಕ್ರಿಸ್ ಮಸ್ ಟ್ರೀ ಇಟ್ಟಿರುವುದಲ್ಲದೆ 200 ರೂಪಾಯಿ ಎಂಟ್ರಿ ಫೀಸ್ ಬೇರೆ ಇಟ್ಟಿದ್ದೀರಿ. ಇದಕ್ಕೆ ಕಾನೂನು ಇದೆಯಾ..? ಹಿಂದೂ ಹಬ್ಬಗಳಿಗೆ ನೀವೂ ಇದೇ ರೀತಿ ಅಲಂಕಾರ ಮಾಡುತ್ತೀರಾ..? ಜನವರಿ 22ಕ್ಕೆ ರಾಮಮಂದಿರ ಉದ್ಘಾಟನೆ ಇದೆ. ಅವತ್ತೂ ಕೂಡ ಇದೇ ರೀತಿ ಅಲಂಕಾರ ಮಾಡಬೇಕು. ಇಲ್ಲವಾದರೆ ಮಾಲ್ ಮುಂದೆ ಕೂತು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಮಾಲ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಮಾಲ್ ಆಫ್ ಏಷಿಯಾಗೆ ಬಂದ ಪೊಲೀಸೆಉ ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರನ್ನು ವಶಕ್ಕೆ ಪಡೆದು, ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮಾಲ್ ನ ಮ್ಯಾನೇಜರ್ ಸ್ಟೀಫನ್ ನೀಡಿದ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ.