For the best experience, open
https://m.suddione.com
on your mobile browser.
Advertisement

ವಯನಾಡಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಡಿಸಿ ಮೇಘಶ್ರೀ : ಚಿತ್ರದುರ್ಗದ ಮಗಳ ಕಾರ್ಯಕ್ಕೆ ಮೆಚ್ಚುಗೆ

08:18 PM Aug 05, 2024 IST | suddionenews
ವಯನಾಡಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಡಿಸಿ ಮೇಘಶ್ರೀ   ಚಿತ್ರದುರ್ಗದ ಮಗಳ ಕಾರ್ಯಕ್ಕೆ ಮೆಚ್ಚುಗೆ
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 05 : ಸುಂದರವಾಗಿದ್ದ ವಯನಾಡು ಭೂಕುಸಿತದಿಂದಾಗಿ ಸ್ಮಶಾನದಂತಾಗಿದೆ. ಊರಿಗೆ ಊರೇ ಕೊಚ್ಚಿ ಹೋಗಿದೆ. ಅದೆಷ್ಟೋ ದೇಹಗಳು ಮಣ್ಣಿನಲ್ಲಿ ಊತು ಹೋಗಿವೆ. ಕಳೆದು ಹೋದವರಿಗಾಗಿ ಕಾಯುತ್ತಿರುವವರು ಅದೆಷ್ಟೋ ಜನ. ವಯನಾಡಿನ ಪರಿಸ್ಥಿತಿಯನ್ನು ನೋಡಿದವರಿಗೆ ಎಂಥವರಿಗೂ ಭಯವಾಗುತ್ತೆ. ಆದರೆ ಆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ, ನಿಷ್ಠೆಯಿಂದ ಕಾರ್ಯ ನಿವರ್ಹಿಸುತ್ತಿರುವುದು ಮೇಘಶ್ರೀ.

Advertisement

ವಯನಾಡಿನ ಭೂ ಕುಸಿತಕ್ಕೂ ಕೆಲವೇ ದಿನಗಳ ಹಿಂದಷ್ಟೇ ಮೇಘಶ್ರೀ ಅವರಿಗೆ ವಯನಾಡಿನ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿತ್ತು. ಪ್ರತಿ ಕ್ಷಣ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ, ಎಲ್ಲವನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಯ ಕಾರ್ಯಕ್ಕೆ ಕೇವಲ ಕೇರಳ ಜನತೆ ಮಾತ್ರ ಮೆಚ್ಚುಗೆ ವ್ಯಕ್ತಪಡಿಸಿಲ್ಲ, ಕರ್ನಾಟಕದ ಮಂದಿಗೂ ಹೆಮ್ಮೆ ಅನಿಸಿದೆ.

ಯಾಕಂದ್ರೆ ಮೇಘಶ್ರೀ ಕರ್ನಾಟಕದವರು ಎಂಬುದು ಮತ್ತೊಂದು ಹೆಮ್ಮೆಯ ವಿಚಾರ. ಜಿಲ್ಲಾಧಿಕಾರಿ ಮೇಘಶ್ರೀ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದವರು. ಎಸ್ ಬಿ ಐ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ರುದ್ರಮುನಿ ಅವರ ಪುತ್ರಿ. ಇಂಜಿನಿಯರಿಂಗ್ ಪದವೀಧರೆಯಾಗಿದ್ದ ಮೇಘಶ್ರೀ ತನ್ನ ಆರಂಭದ ವಿದ್ಯಾಭ್ಯಾಸವನ್ನು ದೊಡ್ಡೇರಿ, ಚಳ್ಳಕೆರೆ, ಚಿತ್ರದುರ್ಗದಲ್ಲಿ ಮುಗಿಸಿದ್ದರು. ಬಳಿಕ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದು, ಇಂಜಿನಿಯರಿಂಗ್ ಮುಗಿಸಿ, ಒಂದೆರಡು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸವನ್ನು ಮಾಡಿದ್ದರು.

Advertisement

ಐಎಎಸ್ ಆಗುವ ಕನಸು ಕಂಡಿದ್ದ ಮೇಘಶ್ರೀ, ಕಷ್ಟಪಟ್ಟು ಓದಿ ಕಡೆಗೂ ಐಎಎಸ್ ಪರೀಕ್ಷೆಯನ್ನು ಪಾಸ್ ಮಾಡಿದರು. ತಿರುವನಂತಪುರ ಸೇರಿದಂತೆ ಹಲವು ಕಡೆ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಹರ್ತಿಕೋಟೆ ಗ್ರಾಮದ ಡಾ.ವಿಕ್ರಮ ಸಿಂಹ ಅವರನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ವಯನಾಡಿನ ಭೂಕುಸಿತಕ್ಕೂ ಮುನ್ನ ಅಂದ್ರೆ ಕಳೆದ ಇಪ್ಪತ್ತು ದಿನಗಳಿಗೂ ಮುನ್ನ ಕೇರಳದ ವಯನಾಡಿಗೆ ವರ್ಗಾವಣೆಗೊಂಡಿದ್ದರು. ಸದ್ಯ ವಯನಾಡಿನ ಭೂಕುಸಿತದ ಸ್ಥಳಗಳಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಸತ್ತವರ ಸಂಬಂಧಿಕರು ಸಿಗದೆ ಇದ್ದಾಗ ತಾವೇ ಮುಂದೆ ನಿಂತು ಅಂತ್ಯ ಸಂಸ್ಕಾರ ಮಾಡಿದ್ದಾರೆ. ಜಿಲ್ಲಾಧಿಕಾರಿಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

Tags :
Advertisement