ಎಂಬಿ ಪಾಟೀಲ್-ಕುಮಾರಸ್ವಾಮಿ ಭೇಟಿಗೆ ಡೇಟ್ ಫಿಕ್ಸ್ : ರಾಜ್ಯಕ್ಕೆ ಏನೆಲ್ಲಾ ಲಾಭವಾಗಬಹುದು..?
ಬೆಂಗಳೂರು : ಉದ್ಯೋಗ ಬಹಳ ಮುಖ್ಯವಾಗಿದೆ. ಎಷ್ಟೋ ಜನ ಉದ್ಯೋಗ ಸಿಗದೆ ಯುವಕರೇ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಬಾರಿ ಉದ್ಯೋಗ ಸೃಷ್ಠಿಯ ನಿರೀಕ್ಷೆ ಇದೆ. ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಸಚಿವ ಎಂ.ಬಿ ಪಾಟೀಲ್ ಅವರು ಭೇಟಿ ಮಾಡುತ್ತಿದ್ದು, ಹೂಡಿಕೆದಾರರು, ಉದ್ಯೋಗದ ಸೃಷ್ಟಿ ಬಗ್ಗೆ ಚರ್ಚೆಯಾಗುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬೃಹತ್ ಕೈಗಾರಿಕಾ ಖಾತೆಯನ್ನು ವಹಿಸಿಕೊಂಡಿದ್ದಾರೆ. ಇತ್ತ ರಾಜ್ಯದಲ್ಲಿ ಎಂ.ಬಿ.ಪಾಟೀಲ್ ಅವರು ಕೈಗಾರಿಕ ಸಚಿವರಾಗಿದ್ದು ಶೀಘ್ರದಲ್ಲಿ ಇಬ್ಬರು ಭೇಟಿ ಮಾಡಿ ಚರ್ಚಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಎಂ.ಬಿ.ಪಾಟೀಲ್ ಅವರು, ಪ್ರಧಾನಿ ಮೋದಿ ಅವರ ತವರು ರಾಜ್ಯವಾದ ಗುಜರಾತಿನಲ್ಲಿ ನೆಲೆಯೂರಲಿರುವ ಅಮೆರಿಕಾದ ಮೈಕ್ರೋ ಸೆಮಿ ಕಂಡಕ್ಟರ್ ಕಂಪನಿಗೆ ಕೇಂದ್ರ ಸರ್ಕಾರ ಶೇಕಡ 50 ಮತ್ತು ಅಲ್ಲಿನ ರಾಜ್ಯ ಸರ್ಕಾರ ಶೇಕಡ 20ರಷ್ಟು ಪ್ರೋತ್ಸಾಹ ಧನ ನೀಡುತ್ತಿವೆ. ನಮಗೂ ಕೂಡ ಇದೇ ಮಾದರಿಯ ಉತ್ತೇಜನ ಬೇಕಾಗಿದೆ. ಹೀಗಾಗಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತಿದ್ದೇನೆ ಎಂದಿದ್ದಾರೆ.
ಸೆಮಿಕಂಡಕ್ಟರ್ ಕ್ಷೇತ್ರವೂ ಆಧುನಿಕ ಜಗತ್ತಿನಲ್ಲಿ ಪ್ರಮುಖ ಉದ್ಯಮವಾಗಿದೆ. ಕೇಂದ್ರ ಸರ್ಕಾರವೂ ಎಲ್ಲಾ ರಾಜ್ಯಗಳಿಗೂ ಸಮಾನ ಅವಕಾಶ ಮತ್ತು ಪ್ರೋತ್ಸಾಹ ನೀಡಬೇಕಾಗಿದೆ. ಇತ್ತಿಚೆಗೆ ಗುಜರಾತ್ ನಲ್ಲಿ ಕೈಗಾರಿಕೆಗೆ ಅತ್ಯಧಿಕ ಷೇರು ನೀಡಲು ಮುಂದಾಗಿದ್ದ ಕೇಂದ್ರದ ನಿಲುವನ್ನು ಹೆಚ್.ಡಿ.ಕುಮಾರಸ್ವಾಮಿ ಅವರು ಆರೋಗ್ಯಕರ ರೀತಿಯಲ್ಲಿ ಆಕ್ಷೇಪಿಸಿದ್ದರು. ಅಂದರೆ ಒಂದು ರಾಜ್ಯದ ಕೈಗಾರಿಕೆಗೆ ದೊಡ್ಡಮಟ್ಟದಲ್ಲಿ ಪ್ರೋತ್ಸಾಹ ನೀಡುವಂತೆ ಎಲ್ಲಾ ರಾಜ್ಯಗಳಿಗೂ ನೀಡಬೇಕಾಗುತ್ತದೆ ಎಂದಿದ್ದಾರೆ.