ದರ್ಶನ್ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ..!
ಬೆಂಗಳೂರು: ದರ್ಶನ್ ಪತ್ನಿ ವಿಜಯಲಕ್ಷ್ಮೀ ನಿನ್ನೆಯಷ್ಟೇ ಬಳ್ಳಾರಿ ಜೈಲಿಗೆ ಭೇಟಿ ನೀಡಿ, ಧೈರ್ಯ ತುಂಬಿ ಹೋಗಿದ್ದರು. ಇಂದು ಜಾಮೀನು ಸಿಗುವ ಭರವಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಇಂದು ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ. ನಾಳೆ ಮಧ್ಯಾಹ್ನ 12.30ಕ್ಕೆ ಅರ್ಜಿ ವಿಚಾರಣೆ ನಡೆಯಲಿದೆ.
ಇಂದು ಕೋರ್ಟ್ ಗೆ ಹಿರಿಯ ವಕೀಲ ಎಸ್ಪಿಪಿ ಪ್ರಸನ್ನ ಕುಮಾರ್ ಹಾಜರಿದ್ದರು. ಅವರ ಸಮ್ಮುಖದಲ್ಲಿ ಸಿ.ವಿ. ನಾಗೇಶ್ ವಾದ ಮಂಡನೆ ಮಾಡಿದರು. ಮಾಧ್ಯಮಗಳು ದರ್ಶನ್ ಅವರನ್ನು ಅಪರಾಧಿ ಎಂದೇ ಬಿಂಬಿಸಿವೆ ಎಂದು ಸಿವಿ ನಾಗೇಶ್ ಟೀಕೆ ಮಾಡಿದ್ದಾರೆ. ಮಾಧ್ಯಮ, ಸಾಮಾಜಿಕ ಜಾಲತಾಣಗಳ ವಿಚಾರವನ್ನು ಉಲ್ಲೇಖಿಸಿದ್ದಾರೆ. ಇಂದು ದೀರ್ಘವಾಗಿ ವಾದ ಮಂಡನೆ ಮಾಡಿದ್ದಾರೆ.
ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿರುವ ವೈರುಧ್ಯಗಳ ಬಗ್ಗೆಯೂ ವಾದ ಮಂಡಿಸಿದ್ದಾರೆ. ಇಂದಿನ ವಾದ ಮಂಡನೆಯಲ್ಲಿ ಕೊಲೆಯಲ್ಲಿ ದರ್ಶನ್ ಪಾತ್ರವೇ ಇಲ್ಲ. ಸಹ ಆರೋಪಿಗಳ ಹೇಳಿಕೆ ಸುಳ್ಳು ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಡಿಜಿಟಲ್ ಸಾಕ್ಷಿಗಳನ್ನು ಕ್ರಿಯೇಟ್ ಮಾಡು ಆರೋಪ ಮಾಡಲಾಗಿದೆ.
ಆದರೆ ಇದಕ್ಕೆ ಆಕ್ಷೇಪಣೆ ಸಲ್ಲಿಸಿರುವ ಎಸ್ಪಿಪಿ ಪ್ರಸನ್ನಕುಮಾರ್, ವಾದ ಮಂಡನೆ ಮಾಡಿದ್ದಾರೆ. ದರ್ಶನ್ ಗೆ ಯಾಕೆ ಜಾಮೀನು ನೀಡಬೇಕೆಂದು ಪ್ರಶ್ನೆ ಮಾಡಿದ್ದಾರೆ. ವಾದ ಪ್ರತಿವಾದ ಆಲಿಸಿರುವ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ. ಇನ್ನು ಬಳ್ಳಾರಿ ಜೈಲಿನಲ್ಲಿ ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ ನರಳುತ್ತಿದ್ದಾರೆ. ಜೈಲಿಗೆ ಬಂದ ವೈದ್ಯರು ತಪಾಸಣೆ ನಡೆಸಿದ್ದಾರೆ. ಆದರೆ ದರ್ಶನ್, ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಒಪ್ಪಿಲ್ಲ. ನಾಳೆ ದರ್ಶನ್ ಕೇಸ್ ಏನಾಗಬಹುದು ಎಂಬ ಕುತೂಹಲವಿದೆ.