ದರ್ಶನ್ ವಿಚಾರ : ಡಿಕೆ ಶಿವಕುಮಾರ್ ಭೇಟಿಯಾದ ದಿನಕರ್ ಹಾಗೂ ವಿಜಯಲಕ್ಷ್ಮೀ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿರುವ ಆರೋಪದಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್ ಕುಟುಂಬಸ್ಥರು ಸದ್ಯ ಕಾನೂನು ಹೋರಾಟ ಮಾಡುತ್ತಿದ್ದಾರೆ. ದರ್ಶನ್ ಅವರನ್ನು ಜೈಲಿನಿಂದ ಹೊರ ತರಲು ಹರಸಾಹಸ ಪಡುತ್ತಿದ್ದಾರೆ. ಇದೀಗ ವಿಜಯಲಕ್ಷ್ಮೀ ಹಾಗೂ ದಿನಕರ್ ತೂಗುದೀಪ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಇಂದು ಸದಾಶಿವನಗರದ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ದರ್ಶನ್ ಅವರನ್ನು ಹಿರ್ಎ ತರಲು ಸಹಾಯ ಮಾಡಿ ಎಂದು ಕೇಳಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ವಿಜಯಲಕ್ಷ್ಮೀ, ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದರು. ಇದೀಗ ಡಿಕೆ ಶಿವಕುಮಾರ್ ಬಳಿ ಸಹಾಯ ಕೇಳಿದ್ದಾರೆ.
ಈ ವೇಳೆ ಡಿಕೆ ಶಿವಕುಮಾರ್ ಅವರು, ಏನಾದರೂ ಅನ್ಯಾಯವಾಗಿದ್ದರೆ ಸರಿ ಪಡಿಸುವುದಕ್ಕೆ ಪ್ರಯತ್ನ ಪಡುತ್ತೇವೆ. ಆದರೆ ನಾವೂ ಕಾನೂನಿಗೆ ಗೌರವ ಕೊಡಬೇಕಿದೆ. ನಾವೆಲ್ಲಾ ದೇಶದ ಕಾನೂನು ಹಾಗೂ ನೆಲದ ಕಾನೂನು ಪಾಲಿಸಬೇಕಿದೆ. ಅನ್ಯಾಯ ಆಗಿದ್ದವರಿಗೆ ನಾವೆಲ್ಲಾ ಸೇರಿ ನ್ಯಾಯ ಒದಗಿಸುವ ಕೆಲಸ ಮಾಡೋಣಾ. ನೊಂದ ಎಲ್ಲರಿಗೂ ತಾಯಿ ಚಾಮುಂಡೇಶ್ವರಿ ಅನುಗ್ರಹ ನೀಡಲಿ ಎಂದಿದ್ದಾರೆ.
ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ದರ್ಶನ್ ಅವರನ್ನು ಹೊರಗೆ ತರಲು ಕುಟುಂಬಸ್ಥರು ಈಗಾಗಲೇ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ದರ್ಶನ್ ಅವರಿಗೆ ಮನೆ ಊಟಕ್ಕಾಗಿಯೂ ಬೇಡಿಕೆ ಇಟ್ಟಿದ್ದರು. ಆದರೆ ಕೋರ್ಟ್ ನಿಂದ ಅದಕ್ಕೆ ಇನ್ನು ಒಪ್ಪಿಗೆ ಸಿಕ್ಕಿಲ್ಲ. ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆಯ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.