ದರ್ಶನ್ ಈಗಲೇ ಜಾಮೀನಿಗೆ ಅರ್ಜಿ ಸಲ್ಲಿಸಲ್ಲ : ವಕೀಲರು ಹೇಳಿದ್ದೇನು..?
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಜೈಲು ಸೇರಿ ಮೂರು ತಿಂಗಳಾಗಿದೆ. ಪೊಲೀಸರು ಕಳೆದ ವಾರವಷ್ಟೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದ ದರ್ಶನ್ ಬಳ್ಳಾರಿಗೆ ಬೇರೆ ಶಿಫ್ಟ್ ಆಗಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಈಗ ಆ ಮಾಹಿತಿ ಸುಳ್ಳಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವುದು 17 ಮಂದಿ. ಪವಿತ್ರಾ ಗೌಡ A1 ಆರೋಪಿ, ದರ್ಶನ್ A2 ಆರೋಪಿ ಇನ್ನುಳಿದವರು ನೆಕ್ಸ್ಟ್ ಸರದಿಯಲ್ಲಿ ನಿಲ್ಲುತ್ತಾರೆ. ಚಾರ್ಜ್ ಶೀಟ್ ಸಲ್ಲಿಕೆಯಾಗುವುದಕ್ಕೂ ಮುನ್ನ ಆರೋಪಿಗಳಿಗೆ ಜಾಮೀನು ಸಿಗುವುದು ಕಷ್ಟ. ಆದರೂ ಚಾರ್ಜ್ ಶೀಟ್ ಸಲ್ಲಿಕೆಗೂ ಮೊದಲೇ ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಕೋರ್ಟ್ ನಲ್ಲಿ ಅರ್ಜಿ ತಿರಸ್ಕಾರವಾಗಿತ್ತು. ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ದರ್ಶನ್ ಜಾಮೀನಿಗೆ ಅರ್ಜಿ ಹಾಕಬಹುದು ಎಂಬ ನಿರೀಕ್ಷೆ ಇತ್ತು.
ಸದ್ಯ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಸಾವಿರಾರು ಪುಟಗಟ್ಟಲೆ ಅಂದ್ರೆ ಹತ್ತಿರತ್ತಿರ 4 ಸಾವಿರ ಪುಟಗಳಷ್ಟು ಇದೆ. ಹೀಗಿರುವಾಗ ಅದರಲ್ಲಿನ ದೋಷಾರೋಪ ಪಟ್ಟಿಯನ್ನು ಓದಬೇಕಾಗುತ್ತದೆ. ಜಾಮೀನಿಗೆ ಅರ್ಜಿ ಸಲ್ಲಿಸುವ ವಿಚಾರಕ್ಕೆ ದರ್ಶನ್ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ. 'ಪ್ರಕರಣದ ವಿಚಾರವಾಗಿ ದರ್ಶನ್ ಜೊತೆಗೆ ಚರ್ಚಿಸಿದ್ದೇನೆ. ನಾವೂ ಆರೋಪ ಪಟ್ಟಿಯನ್ನು ಓದುತ್ತಿದ್ದೇವೆ. ಹೀಗಾಗಿ ಈಗಲೇ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈ ಸುದ್ದಿ ಬೇಸರ ತರಿಸಿದೆ.