ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಪಾತ್ರವಿಲ್ಲ.. ವಿನಯ್, ಪವನ್ ಸೂಚನೆ ಮೇರೆಗೆ ಅಪಹರಣವಾಗಿದೆ : ಜಾಮೀನು ಅರ್ಜಿಯಲ್ಲಿ ಉಲ್ಲೇಖ..!
ಬೆಂಗಳೂರು: ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಪ್ಲ್ಯಾನ್ ಮಾಡಿ ಕರೆತಂದು, ಪಟ್ಟಣಗೆರೆ ಶೆಡ್ ನಲ್ಲಿ ಕೊಲೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು 17 ಆರೋಪಿಗಳನ್ನು ಬಂಧಿಸಿದ್ದಾರೆ. ಅದರಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್ ಎ2 ಆರೋಪಿಯಾಗಿದ್ದಾರೆ. ಚಾರ್ಜ್ ಶೀಟ್ ನಲ್ಲೂ ಆರೋಪಿಗಳ ಪಟ್ಟಿ ಹಾಗೆಯೇ ಇದೆ. ಸದ್ಯ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆ ಅರ್ಜಿಯಲ್ಲಿನ ಮಾಹಿತಿಯು ಖಾಸಗಿ ಚಾನೆಲ್ ಗಳಿಗೆ ಸೋರಿಕೆಯಾಗಿದೆ. ಅದರಲ್ಲೂ ದರ್ಶನ್ ಗೂ ರೇಣುಕಾಸ್ವಾಮಿ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಉಲ್ಲೇಖವಾಗಿದೆಯಂತೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ದರ್ಶನ್ ಗೂ ಯಾವುದೇ ಸಂಬಂಧವಿಲ್ಲ. ಆದರೆ ಸುಮ್ಮನೆ ದರ್ಶನ್ ಹೆಸರನ್ನು ಎಳೆದು ತರಲಾಗಿದೆ. ರೇಣುಕಾಸ್ವಾಮಿ ಅಪಹರಣ ಮಾಡಲು ನಾನು ಸೂಚನೆ ನೀಡಿಲ್ಲ. ರೇಣುಕಾಸ್ವಾಮಿ ಹತ್ಯೆಯಲ್ಲಿ ನನ್ನ ಪಾತ್ರವಿಲ್ಲ. ಎ10 ಆರೋಪಿ ವಿನಯ್ ಹಾಗೂ ಎ3 ಆರೋಪಿ ಪವನ್ ಸೂಚನೆ ಮೇರೆಗೆ ಅಪಹರಣ ಮಾಡಲಾಗಿದೆ ಎಂದು ಜಾಮೀನು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ.
ಇನ್ನು ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಿನ್ನೆಯಷ್ಟೇ ನಡೆದಿದೆ. ವಾದ ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ನಾಳೆಗೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಸಾವುರಾರು ಪುಟಗಳ ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ಅವರು ಹೊಡೆದಿರುವ ಬಗ್ಗೆಯೂ ಪೊಲೀಸರು ಉಲ್ಲೇಖ ಮಾಡಲಾಗಿದೆ. ತೀರಾ ಬರ್ಬರವಾಗಿ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಲಾಗಿದೆ. ದರ್ಶನ್ ಪರ ವಕೀಲರು ಚಾರ್ಜ್ ಶೀಟ್ ಅನ್ನು ಗಮನವಿಟ್ಟು ನೋಡಿ ಈಗ ಕೋರ್ಟ್ ಮುಂದೆ ವಾದಕ್ಕೆ ನಿಂತಿದ್ದಾರೆ.