ದಿನಗೂಲಿ ನೌಕರನಾಗಿದ್ದವ ಅಧಿಕಾರಿಯಾಗಿ ಬಡ್ತಿ : ಅಕ್ರಮ ನೇಮಕವೆಂದು ತೋಟಗಾರಿಕಾ ಅಧಿಕಾರಿ ವಜಾ..!
ಹಾವೇರಿ: ಸುಳ್ಳು ದಾಖಲೆ ನೀಡಿ ಅಕ್ರಮವಾಗಿ ನೇಮಕವಾಗಿದ್ದ ಅಧಿಕಾರಿಯನ್ನು ವಜಾಗೊಳಿಸಲಾಗಿದೆ. ಬಸವರಾಜಪ್ಪ ನಿಂಗಪ್ಪ ಬರೇಗಾರ ಹಾವೇರಿ ತೋಟಗಾರಿಕಾ ಇಲಾಖೆಯಲ್ಲಿ ಸಹಾಯಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಇವರ ನೇಮಕಾತಿಯೇ ಅಕ್ರಮವೆಂದು ತಿಳಿದ ಮೇಲೆ ವಜಾಗೊಳಿಸಲಾಗಿದೆ.
ಬಸವರಾಜಪ್ಪ ಮೇಲೆ ದೂರುಗಳು ಬಂದಿದ್ದವು. ಈ ದೂರನ್ನ ಪರಿಶೀಲನೆ ನಡೆಸಲಾಗಿತ್ತು. ಸಮಿತಿಯು ಈ ಸಂಬಂಧ ಪರಿಶೀಲನೆ ನಡೆಸಿ, ವರದಿ ನೀಡಿತ್ತು. ಬಸವರಾಜಪ್ಪ ನಿಯಮಬಾಹಿರವಾಗಿ ನೇಮಕಾತಿಗೊಂಡಿರುವುದು ವರದಿಯಲ್ಲಿ ಬಹಿರಂಗವಾದ ಮೇಲೆ ತೋಟಗಾರಿಕಾ ನಿರ್ದೇಶಕರು ವಜಾಗೊಳಿಸಿ, ಆದೇಶ ಹೊರಡಿಸಿದ್ದಾರೆ. ಬಸವರಾಜಪ್ಪ ಈ ಮೊದಲು ತೋಟಗಾರಿಕಾ ಇಲಾಖೆಯಲ್ಲಿಯೇ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಹಾವೇರಿಯ ತೋಟಗಾರಿಕಾ ಇಲಾಕಲೆಯ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. ಈ ನೇಮಕಾತಿ ಅಕ್ರಮ ಎಂದು ವರದಿಯಲ್ಲಿ ತಿಳಿದು ಬಂದಿದೆ..
1981ರಿಂದ 1991ರವರೆಗೆ ದಿನಗೂಲಿ ನೌಕರನಾಗಿ ಬಸವರಾಜಪ್ಪ ಕೆಲಸ ಮಾಡುತ್ತಿದ್ದರು ಎಂಬುದಾಗಿ ಸುಳ್ಳು ದಾಖಲೆಯನ್ನು ಸೃಷ್ಟಿಸಿದ್ದರು. ಈ ಮೂಲಕ 1992ರಿಂದ ತೋಟಗಾರಿಕಾ ಅಧಿಕಾರಿಯಾಗಿ ನೇಮಕಗೊಂಡರು. 2012ರಲ್ಲಿ ಮುಂಬಡ್ತಿ ಕೂಡ ನೀಡಿದ್ದರು. 1981ರಿಂದ 1991ರವರೆಗೆ ದಿನಗೂಲಿ ನೌಕರನಾಗಿ ಕೆಲಸ ಮಾಡಿರುವುದಾಗಿ ದಾಖಲೆ ನೀಡಿದ್ದರು. ಆದರೆ, ಆ ಅವಧಿಯಲ್ಲಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ರೆಗ್ಯುಲರ್ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದರು ಎಂಬುವುದು ದೃಢಪಟ್ಟಿದೆ.
10 ವರ್ಷಗಳ ನಿರಂತರ ಸೇವೆ ಪೂರೈಸದೆ ಸಕ್ರಮಾತಿ ಷರತ್ತುಗಳನ್ನು ಉಲ್ಲಂಘಿಸಿ ನೇಮಕವಾಗಿರುವುದು ಸಮಿತಿ ಪರಿಶೀಲನೆ ವೇಳೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಹಾವೇರಿ ಸಹಾಯಕ ತೋಟಗಾರಿಕೆ ಅಧಿಕಾರಿ ಬಸವರಾಜಪ್ಪ ನಿಂಗಪ್ಪ ಬರೇಗಾರ ಅವರನ್ನು ಇಲಾಖೆ ನಿರ್ದೇಶಕರು ಸೇವೆಯಿಂದ ವಜಾಮಾಡಿದ್ದಾರೆ.