ಮಂತ್ರಾಲಯದ ರಾಯರ ಮಠದಲ್ಲಿ ಹುಂಡಿ ಎಣಿಕೆ : 33 ದಿನಕ್ಕೆ ಕೋಟಿ ಕೋಟಿ ಕಾಣಿಕೆ
ರಾಯಚೂರು: ದಿನೇ ದಿನೇ ರಾಘವೇಂದ್ರ ಸ್ವಾಮಿಗಳ ಖ್ಯಾತಿ ಹೆಚ್ಚಾಗುತ್ತಲೆ ಇದೆ. ಜೊತೆಗೆ ಭಕ್ತರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಈ ಮೂಲಕ ರಾಯರ ಹುಂಡಿಗೆ ಹರಕೆಯ ರೂಪಾದಲ್ಲಿ ಕಾಣಿಕೆಯನ್ನು ಅರ್ಪಿಸಿ ಬರಲಾಗುತ್ತಿದೆ. ಹೀಗಾಗಿ ಭಕ್ತರ ಹರಕೆಯಿಂದ ತುಂಬಿದ ಹುಂಡಿಯ ಎಣಿಕೆ ಕಾರ್ಯ ಇಂದು ನಡೆದಿದೆ.
33 ದಿನದಲ್ಲಿ ರಾಯರ ಸನ್ನಿದಿಗೆ ಹರಿದು ಬಂದ ಕಾಣಿಕೆ 3 ಕೋಟಿ 83 ಲಕ್ಷದ 70 ಸಾವಿರ ರೂಪಾಯಿ ಆಗಿದೆ. ಸಂಕ್ರಾಂತಿ ಹಬ್ಬ ಬೇರೆ ಇದ್ದ ಹಿನ್ನೆಲೆ ಭಕ್ತರ ಸಂಖ್ಯೆ ಕೂಡ ಜಾಸ್ತಿ ಇತ್ತು. ಹೀಗಾಗಿ ಕಾಣಿಕೆಯೂ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದೆ ಎಂದು ಹೇಳಲಾಗಿದೆ. ಇನ್ನು ಡಾ. ಸುಬುದೇಂದ್ರ ತೀರ್ಥರ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ.
ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಈ ಹುಂಡಿ ಎಣಿಕೆ ಕಾರ್ಯ ನಡೆದಿದೆ. ನೂರಾರು ಸಿಬ್ಬಂದಿ ಹುಂಡು ಎಣಿಕೆಯನ್ನು ಮಾಡಿದ್ದಾರೆ. ರಾಘವೇಂದ್ರ ಸ್ವಾಮಿಗಳ ಬೃಂದಾವನ ಈ ಮಠದಲ್ಲಿ ಇದೆ. ರಾಘವೇಂದ್ರ ಸ್ವಾಮಿಗಳು 1595-1671 ರ ಅಂತರದಲ್ಲಿ ಅನೇಕ ಪವಾಡಗಳನ್ನು ಮಾಡಿದ್ದರು. ಈಗ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಪವಾಡವಿದೆ ಎಂದೇ ಎಲ್ಲರು ನಂಬುತ್ತಾರೆ. ಅಲ್ಲಿಗೆ ಹೋಗಿ ಬಂದರೆ ಎಲ್ಲವೂ ಒಳ್ಳೆಯದಾಗುತ್ತೆ ಎಂಬುದು ಹೋಗಿ ಬಂದವರ ನಂಬಿಕೆಯಾಗಿದೆ. ಹೀಗಾಗಿ ಪ್ರತಿದಿನ ನೂರಾರು ಭಕ್ತರು ರಾಯರ ಮಠಕ್ಕೆ ಭೇಟಿ ನೀಡಿ, ದರ್ಶನ ಪಡೆಯುತ್ತಾರೆ. ಬೇಡಿದ ವರಕ್ಕೆ ಹರಕೆ ರೂಪದಲ್ಲಿ ಕಾಣಿಕೆ ಅರ್ಪಿಸಿ ಬರುತ್ತಾರೆ.