ಮಂಡ್ಯದಿಂದ ಸುಮಲತಾ ವಿರುದ್ಧ ಸ್ಪರ್ಧೆ : ಡಾ. ಮಂಜುನಾಥ್, ಪತ್ನಿ ಹೇಳಿದ್ದೇನು..?
ಮಂಡ್ಯ: ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಮಂಡ್ಯ ಕಣ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಈ ಬಾರಿಯ ಲೋಕಸಭೆಯಲ್ಲೂ ಹೆಚ್ಚಿನ ಗಮನ ಸೆಳೆಯುತ್ತಿದೆ. ಸುಮಲತಾ ಬಿಜೆಪಿಗೆ ಸೇರಿ ಆಗಿದೆ. ಆದರೆ ಮೈತ್ರಿ ಮಾಡಿಕೊಂಡಿರುವ ಕಾರಣ ಜೆಡಿಎಸ್, ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಕ್ಕೆ ಸುತಾರಾಮ್ ಒಪ್ಪುವುದಿಲ್ಲ. ದೊಡ್ಡಗೌಡರ ಅಳಿಯ ಡಾ. ಮಂಜುನಾಥ್ ನಿವೃತ್ತಿ ಕೂಡ ಪಡೆದಿದ್ದು, ರಾಜಕೀಯಕ್ಕೆ ಧುಮ್ಮುಕ್ಕುತ್ತಿದ್ದಾರೆ ಎನ್ನಲಾಗಿದೆ.
ಡಾ. ಮಂಜುನಾಥ್ ಅವರನ್ನು ಮಂಡ್ಯದಿಂದಾನೇ ಕಣಕ್ಕೆ ಇಳಿಸುವ ವಿಚಾರದ ಬಗ್ಗೆ ಡಾ. ಮಂಜುನಾಥ್ ಮಾತನಾಡಿದ್ದು, ಇದರ ಬಗ್ಗೆ ನಾನು ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ರಾಜಕೀಯಕ್ಕೆ ಬರಬೇಕಾ? ಲೋಕಸಭಾ ಚುನಾವಣೆಗೆ ನಿಲ್ಲಬೇಕಾ? ಎಂಬ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ನಾನು ರಾಷ್ಟ್ರಕ್ಕೂ ಸೇವೆ ಮಾಡಲಿ ಅನ್ನೋದು ಜನರ ಬಯಕೆ ಎಂದರು.
ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಸೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಡಾ.ಸಿ.ಎನ್ ಮಂಜುನಾಥ್ ಹಾಗೂ ಅವರ ಪತ್ನಿ ಹೆಚ್.ಡಿ ಅನುಸೂಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮಂಡ್ಯದಿಂದಲೇ ಡಾ.ಸಿ.ಎನ್ ಮಂಜುನಾಥ್ ಅವರು ಸ್ಪರ್ಧಿಸುತ್ತಾರಾ ಅನ್ನೋ ಪ್ರಶ್ನೆಗೆ ದೇವೇಗೌಡರ ಮಗಳು ಪ್ರತಿಕ್ರಿಯೆ ನೀಡಿದರು. ನೋಡಿ ಹುಟ್ಟಿದಾಗಲೇ ರಾಜಕೀಯದ ಮನೆಯಲ್ಲಿ ಹುಟ್ಟಿದವಳು ನಾನು. ನಾನು ಹುಟ್ಟಿದ ಮರು ದಿನವೇ ನಮ್ಮ ತಂದೆ ಎಂಎಲ್‌ಎ ಆದರು. ರಾಜಕೀಯದ ಏಳು-ಬೀಳುಗಳನ್ನ ನಾನು ನೋಡಿದ್ದೀನಿ. ಸದ್ಯದ ಪರಿಸ್ಥಿತಿಯಲ್ಲಿ ಡಾಕ್ಟರ್ ಸಿ.ಎನ್ ಮಂಜುನಾಥ್ ಅವರು ಜನ ಸೇವೆ ಮಾಡಿದ್ದಾರೆ ಎಂದಿದ್ದಾರೆ.