ಲೋಕಸಭಾ ಚುನಾವಣೆ ಒಳಗೆ ಕಾಂಗ್ರೆಸ್ ಸರ್ಕಾರ ಪತನ : ಈಶ್ವರಪ್ಪ ಭವಿಷ್ಯ
ರಾಯಚೂರು: ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಎರಡು ಪಕ್ಷಗಳು ಪಣ ತೊಟ್ಟಿವೆ. ಅದರ ತಯಾರಿಯೂ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆದ್ ಪಕ್ಷವನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಂದಾಗಿವೆ. ಇದರ ನಡುವೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ, ಕಾಂಗ್ರೆಸ್ ಸರ್ಕಾರದ ಭವಿಷ್ಯ ನುಡಿದಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ. ದೇಶದಲ್ಲಿಯೇ ಕಾಂಗ್ರೆಸ್ ನವರಿಗೆ ಅಧಿಕಾರ ಇರಲಿಲ್ಲ. ಈಗ ರಾಜ್ಯದಲ್ಲಿ ಗ್ಯಾರಂಟಿ, ಅದು ಇದು ಅಂತ ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಡಿಕೆಶಿ ಕೇಸ್ ಬಂದಿದೆ. ಸತೀಶ್ ಜಾರಕಿಹೊಳಿ ಎಷ್ಟು ಜನರನ್ನು ಕರೆದೊಯ್ಯುತ್ತಾರೋ ಗೊತ್ತಿಲ್ಲ. ಇದನ್ನೆಲ್ಲ ನೋಡಿದರೆ ಸರ್ಕಾರ ಬಿದ್ದು ಹೋಗುತ್ತೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.
ಇದೇ ವೇಳೆ ಸಚಿವ ಶರಣ ಪ್ರಕಾಶ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಪೂಜಾರಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾತನಾಡಿದ ಈಶ್ವರಪ್ಪ ಅವರು, ನನ್ನ ಹೆಸರನ್ನು ಬರೆದಿಟ್ಟು ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ನನ್ನ ರಾಜೀನಾಮೆಗೆ ಕಾಂಗ್ರೆಸ್ ನವರು ಪಟ್ಟು ಹಿಡಿಯಲಿಲ್ಲ. ಆದರೆ ನಾನೇ ಪ್ರಧಾನಿ ಮೋದಿ ಹಾಗೂ ಅಮಿತ್ ಶಾಗೆ ರಾಜೀನಾಮೆ ಕೊಟ್ಟೆ. ಆಮೇಲೆ ತನಿಖೆ ವೇಳೆ ನಿರ್ದೋಶಿ ಅಂತ ಸಾಬೀತಾಯ್ತು. ನಾನು ಸಚಿವ ಶರಣ ಪ್ರಕಾಶ್ ದೂಷಿ ಅಂತ ಹೇಳಲ್ಲ. ಆದರೆ ಅವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಈಗ ರಾಜೀನಾಮೆ ನೀಡಲಿ, ನಿರ್ದೋಷಿಯಾದ ಬಳಿಕ ಮತ್ತೆ ಮಂತ್ರಿಯಾಗಲಿ ಎಂದು ಈಶ್ವರಪ್ಪ ಹೇಳಿದ್ದಾರೆ.