ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನ : ಕುಮಾರಸ್ವಾಮಿ ಹೇಳಿಕೆಗೆ ಸಚಿವ ಹೆಚ್ ಕೆ ಪಾಟೀಲ್ ಏನಂದ್ರು..?
ಮೈಸೂರು: ಲೋಕಸಭಾ ಚುನಾವಣೆಯ ಬಳಿಕ ರಾಜಕೀಯದಲ್ಲಿ ಬದಲಾವಣೆಗಳು ಆಗಲಿವೆ ಎಂದು ಬಿಜೆಪಿ ನಾಯಕರು, ದಳಪತಿಗಳು ಆಗಾಗ ಹೇಳುತ್ತಲೆ ಇದ್ದಾರೆ. ಲೋಕಸಭೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ನುಡಿದಿದ್ದರು. ಈ ಸಂಬಂಧ ಸಷಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡುವ ಮೂಲಕ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನಾವೂ ಗಟ್ಟಿಯಾಗಿದ್ದೇವೆ. ಹೀಗಾಗಿ ನಮ್ಮ ಸರ್ಕಾರ ಪತನವಾಗುವುದಿಲ್ಲ. ಹೆಚ್ ಡಿ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದವರು. ಈಗ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಈ ವೇಳೆ ಹೇಳಿಕೆಗಳನ್ನು ನೀಡುವ ಮೂಲಕ, ಸರ್ಕಾರವನ್ನು ಅಲುಗಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸಚಿವ ಸ್ಥಾನ ಸಿಗದ ಕಾರಣ ತಮ್ಮದೇ ಪಕ್ಷದ ವಿರುದ್ಧ ಬಿಕೆ ಹರಿಪ್ರಸಾದ್ ಹರಿಹಾಯುತ್ತಿದ್ದಾರೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಬಿಕೆ ಹರಿಪ್ರಸಾದ್ ಅವರು ಪಕ್ಷದ ವಿರುದ್ಧವಾಗಿ ಮಾತನಾಡುತ್ತಿರುವ ಬಗ್ಗೆ ಮಾತನಾಡಿದ ಹೆಚ್ ಕೆ ಪಾಟೀಲ್ ಅವರು, ಎಂಎಲ್ಸಿ ಹರಿಪ್ರಸಾದ್ ನೀಡಿದ ಹೇಳಿಕೆಯನ್ನು ನಾನು ನೋಡಿಲ್ಲ. ಕೆಲವೊಮ್ಮೆ ಮಾಧ್ಯಮಗಳೇ ಇಂತಹ ವಿಚಾರಗಳನ್ನು ಪ್ರಸ್ತಾಪ ಮಾಡುತ್ತವೆ. ಇದು ಮಾಧ್ಯಮಗಳ ಸೃಷ್ಟಿ ಅಷ್ಟೇ ಎಂದಿದ್ದಾರೆ.
ಇನ್ನು ಮೈಸೂರಿನ ಬಗ್ಗೆ ಮಾತನಾಡಿ, ಸಾಂಸ್ಕೃತಿಕ ನಗರಿ ಮೈಸೂರು, ಪ್ರವಾಸಿತಾಣಕ್ಕೆ ಹೆಸರುವಾಸಿಯಾಗಿದೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಮೈಸೂರು ಕೆಲಸ ಮಾಡಿದೆ. ಮೈಸೂರು ಬ್ರಾಂಡ್ ಲೋಗೋ ಸಹ ಅನಾವರಣ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.