ಎತ್ತಿನಹೊಳೆ ಯೋಜನೆಗೆ ಸಿಎಂ ಅಧಿಕೃತ ಚಾಲನೆ : ಡಿಸಿಎಂ ಡಿಕೆಶಿ ಹೇಳಿದ್ದೇನು..?
ಹಾಸನ: ಬಹು ನಿರೀಕ್ಷಿತ ಎತ್ತಿನ ಹೊಳೆ ಯೋಜನೆಗೆ ಇಂದಿನಿಂದ ಅಧಿಕೃತವಾಹಿ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡನಗರದ ವಿತರಣಾ ತೊಟ್ಟಿ 3 ರಲ್ಲಿ ನೀರೆತ್ತುವ ಪಂಪ್ ಮತ್ತು ಮೋಟಾರುಗಳನ್ನು ಆನ್ ಮಾಡುವ ಮೂಲಕ ಯೋಜನೆಯ ಮೊದಲ ಹಂತವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಉದ್ಘಾಟನೆಗೂ ಮುನ್ನ ಹೋಮ ಹವನವನ್ನು ನಡೆಸಿದ್ದಾರೆ. ಜೊತೆಗೆ ಹೆಬ್ಬನಹಳ್ಳಿಯ ವಿತರಣಾ ತೊಟ್ಟಿಯ 4ರಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಬಾಗಿನ ಅರ್ಪಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ಇದರ ಉಸ್ತುವಾರಿ ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರ ಬಳಿ ಟೇಪ್ ಕಟ್ ಮಾಡಿಸುವ ಮೂಲಕ ಚಾಲನೆ ನೀಡಿದರು. ಮಧ್ಯಾಹ್ನದ ವೇಳೆಗೆ ಈ ಸಂಬಂಧ ಸಮಾವೇಶ ಕೂಡ ನಡೆಯಲಿದೆ.
ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ ಡಿಕೆ ಶಿವಕುಮಾರ್, ಕರ್ನಾಟಕದ ಇತಿಹಾಸದಲ್ಲಿ ಇದೊಂದು ಚರಿತ್ರೆಯಾದ ದಿನ. ಇತ್ತಿಚಿನ ದಶಕಗಳಲ್ಲಿ ಇಷ್ಟು ದೊಡ್ಡ ಯೋಜನೆಯನ್ನು ರಾಜ್ಯ ಸರ್ಕಾರ ಉದ್ಘಾಟನೆ ಮಾಡುತ್ತಿರುವುದು ಸಂತಸದ ದಿನ. ಗೌರಿ ಹಬ್ಬದ ದಿನ ಗಂಗೆ ಪೂಜೆ ಮಾಡ್ತಾ ಇದ್ದೀವಿ. ಪಶ್ಚಿಮ ಘಟ್ಟಕದಿಂದ ನೀರನ್ನು ಬಯಲು ಸೀಮೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡ್ತಾ ಇದ್ದೀವಿ. ಈ ಜಾಗದಲ್ಲಿ ಪ್ರಾರಂಭ ಮಾಡಲು ಹೋದಾಗ ಇದೊಂದು ಎತ್ತಿನ ಹೊಳೆ, ಎತ್ತು ಕುಡೊಯೋಕೆ ನೀರು, ಇಲ್ಲಿ ಹೇಗೆ ನೀರು ಬರುತ್ತೆ, ಹೇಗೆ ನೀರನ್ನು ತೆಗೆದುಕೊಂಡು ಹೋಗ್ತಾರೆ ಅಂತ ಮಾಧ್ಯಮ ಸ್ನೇಹಿತರು ಕೇಳಿದ್ರು ಅಂತ ನಮ್ಮ ಅಧಿಕಾರಿಯೊಬ್ಬರು ಹೇಳಿದ್ರು.ಏನು ಸಾಧ್ಯವಿಲ್ಲ ಅಂದುಕೊಳ್ಳುತ್ತಾರೋ ಅದನ್ನು ಸಾಧ್ಯ ಎಂದು ತೋರಿಸುವ ಕೆಲಸವನ್ನು ನಾವೀಗ ಮಾಡಿದ್ದೇವೆ. ಈ ಯೋಜನೆ ನಮ್ಮ ಪ್ರತಿಷ್ಠೆ ಮತ್ತು ಸಂಕಲ್ಪವಾವಿತ್ತು ಎಂದಿದ್ದಾರೆ.