ದೆಹಲಿ ಚಲೋಗೆ ಬೆಂಬಲ ನೀಡುವಂತೆ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಪತ್ರ
ನವದೆಹಲಿ: ಇತ್ತಿಚೆಗಷ್ಟೇ ಕೇಂದ್ರ ಸರ್ಕಾರದಿಂದ ಮಧ್ಯಂತರ ಬಜೆಟ್ ಘೋಷಣೆ ಮಾಡಲಾಗಿತ್ತು. ಆದರೆ ರಾಜ್ಯಕ್ಕೆ ಬರಬೇಕಾದಷ್ಟು ಅನುದಾನ ಸಿಕ್ಕಿಲ್ಲ ಎಂದು ರಾಜ್ಯ ಸರ್ಕಾರ ಕಿಡಿಕಾರಿದೆ. ಈ ಹಿನ್ನೆಲೆ ನಾಳೆ ದೆಹಲಿ ಚಲೋ ನಡೆಸಲು ಸಿದ್ಧತೆ ನಡೆಸಿದ್ದಾರೆ. ಕೇಂದ್ರದ ತಾರತಮ್ಯ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದು, ಎಲ್ಲರೂ ಈ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಸಿಎಂ ಮನವಿ ಮಾಡಿದ್ದಾರೆ.
ಅನುದಾನ ತಾರತಮ್ಯ ಖಂಡಿಸಿ, ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಯಲಿದ್ದು, ಈ ಹೋರಾಟದಲ್ಲಿ ಭಾಗಿಯಾಗಬೇಕೆಂದು ಸಿಎಂ ಸಿದ್ದರಾಮಯ್ಯ ರಾಜ್ಯದ ಎಲ್ಲಾ ಸಂಸದರಿಗೂ ತಿಳಿಸಿದ್ದಾರೆ. ಹೋರಾಟದಲ್ಲಿ ಭಾಗಿಯಾಗಿ ಬೆಂಬಲ ಸೂಚಿಸುವಂತೆ ತಿಳಿಸಿದ್ದಾರೆ. ಇದರ ಜೊತೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೂ ಪತ್ರ ಬರೆದು, ಬೆಂಬಲ ಕೋರಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಡಿವಿ ಸದಾನಂದಗೌಡ ಸೇರಿದಂತೆ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರಿಗೂ ಪತ್ರ ಬರೆದಿದ್ದಾರೆ.
ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ನಿನ್ನೆಯೇ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದರು. ಇದು ಸರ್ಕಾರದ ಹೋರಾಟ. ಕಾಂಗ್ರೆಸ್-ಬಿಜೆಪಿಗೆ ಸಂಬಂಧವಿಲ್ಲ. ಕೇಂದ್ರ ಸರ್ಕಾರದ ಗಮನ ಸೆಳೆಯಲು ಈ ಹೋರಾಟ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಹಾಗೂ ನಾವೂ ಸದಾ ಜನರ ಧ್ವನಿಯಾಗಿರುತ್ತೇವೆ. ನಮ್ಮ ಅನುದಾನ ನಮ್ಮ ಹಕ್ಕು. ನಮಗೆ ಸಿಗಬೇಕಾದ ಪಾಲು ಕೊಡಿಸುವುದು ನಮ್ಮ ಕರ್ತವ್ಯ. ಕೇಂದ್ರ ಸರ್ಕಾರದ ಬಳಿ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದರು.