ಪ್ರಜ್ವಲ್ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಸಿಎಂ ಸಿದ್ದರಾಮಯ್ಯ ಪತ್ರ..!
ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಸದ್ದು ಮಾಡಿ ಇಷ್ಟು ದಿನಗಳಾದರೂ ಪ್ರಜ್ವಲ್ ರೇವಣ್ಣ ಅವರು ರಾಜ್ಯಕ್ಕೆ ಬರುತ್ತಿಲ್ಲ, ಎಸ್ಐಟಿ ಅಧಿಕಾರಿಗಳಿಂದಾನೂ ಅವರನ್ನು ಕರೆತರುವುದಕ್ಕೆ ಆಗುತ್ತಿಲ್ಲ. ದೇಶದಿಂದ ದೇಶಕ್ಕೆ ಓಡಾಡುತ್ತಾ ಪ್ರಜ್ವಲ್ ರೇವಣ್ಣ ಆರಾಮವಾಗಿ ಇದ್ದಾರೆ. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಒಂದು ನಿರ್ಧಾರಕ್ಕೆ ಬಂದಿದ್ದು, ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಿದ್ದಾರೆ.
ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಮಾತನಾಡಿದ್ದು, ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಈಗಾಗಲೇ ವಾರೆಂಟ್ ಜಾರಿಯಾಗಿದೆ. ಅದರ ಆಧಾರದ ಮೇಲೆ ಪಾಸ್ ಪೋರ್ಟ್ ರದ್ದು ಕೋರಿ ಪತ್ರ ಬರೆಯಲಾಗಿದೆ. ಪಾಸ್ ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ಭಾರತಕ್ಕೆ ಬರಲೇಬೇಕಾಗುತ್ತದೆ ಎಂದಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ಅವರಿಗೆ ಶರಣಾಗುವಂತೆ ಹೇಳಿರುವ ವಿಚಾರವಾಗಿ ಮಾತನಾಡಿ, ಇದು ಅವರ ಕುಟುಂಬದ ಆಂತರಿಕ ವಿಚಾರ. ಸರ್ಕಾರದ ವತಿಯಿಂದ ಯಾರ ಫೋನ್ ಟ್ಯಾಪ್ ಮಾಡಿಲ್ಲ. ಒಂದು ವೇಳೆ ಫೋನ್ ಟ್ಯಾಪ್ ಆಗಿದ್ದರೆ ದಾಖಲೆ ಕೊಡಲಿ, ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ.
ಇದೇ ವೇಳೆ ದೇವರಾಜೇಗೌಡ ಬಗ್ಗೆ ಮಾತನಾಡಿ, ವಕೀಲ ದೇವರಾಜೇಗೌಡ ಆಡಿಯೋ ಬಗ್ಗೆ ಎಸ್ಐಟಿ ನೋಡಿಕೊಳ್ಳುತ್ತದೆ. ಪ್ರತಿಯೊಂದು ಹಂತದಲ್ಲಿ ತನಿಖೆ ಮಾಡುವುದಕ್ಕೆ ನಾವೂ ಹೇಳಲ್ಲ. ತನಿಖೆ ಮಾಡಲು ಎಸ್ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. ಹೆಚ್.ಡಿ. ಕುಮಾರಸ್ವಾಮಿ ಅವರು ಅದ್ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಬಹಳ ಕೆಲಸವಿದೆ. ಆಡಳಿತ ನಡೆಸಬೇಕು. ಇಡೀ ದೇಶ ನಮ್ಮ ಕಾಂಗ್ರೆಸ್ ಸರ್ಕಾರದ ಕಡೆಗೆ ನೋಡುತ್ತಿದೆ ಎಂದು ದೇವೇಗೌಡರ ಕುಟುಂಬ ಮುಗಿಸಲು ಷಡ್ಯಂತ್ರ ನಡೆಸುತ್ತಿದೆ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.