ಬೆಳಗಾವಿಯಲ್ಲಿ ಪ್ರಧಾನಿ ಮೋದಿ : ಸಿಎಂ ಸಿದ್ದರಾಮಯ್ಯ ವಿಮಾನಕ್ಕೆ ನಿರಾಕರಣೆ..!
ಬೆಳಗಾವಿ: ರಾಜ್ಯದ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಅದಕ್ಕಾಗಿಯೇ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಬೆಳಗಾವಿಯಲ್ಲಿದ್ದು, ಬಳಿಕ ಅಲ್ಲಿಂದ ಶಿರಸಿಗೆ ತೆರಳಲಿದ್ದಾರೆ. ಈಗಾಗಲೇ ಬೆಳಗಾವಿಯಲ್ಲಿ ಜನರನ್ನುದ್ದೇಶಿಸಿ ಭಾಷಣ ಕೂಡ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಬೆಳಗಾವಿಯಲ್ಲಿ ಇರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಅವರ ವಿಮಾನ ಪ್ರವೇಶಕ್ಕೆ ಬೆಳಗಾವಿಯಲ್ಲಿ ಅನುಮತಿ ಸಿಕ್ಕಿಲ್ಲ.
ಪ್ರಧಾನಿ ಮೋದಿ ಶನಿವಾರ ರಾತ್ರಿಯೇ ಬೆಳಗಾವಿಗೆ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಬೆಳಗಾವಿ ಪ್ರವಾಸ ಕೈಗೊಂಡಿದ್ದು, ಇಬ್ಬರ ವಿಮಾನವೂ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಯೇ ಇಳಿಯಬೇಕಾಗಿತ್ತು. ಆದರೆ ಮಾಲಿನಿ ಮೈದಾನದಲ್ಲಿ ಸಭೆ ಮುಗಿಸಿಕೊಂಡು, ಪ್ರಧಾನಿ ಮೋದಿ ವಾಪಾಸ್ ಶಿರಸಿಗೆ ತೆರಳಬೇಕಿತ್ತು. ಈ ಹಿನ್ನೆಲೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೇರೆ ವಿಮಾನ ನಿಲ್ದಾಣಗಳ ಪ್ರವೇಶವನ್ನು ನಿರಾಕರಣೆ ಮಾಡಲಾಗಿತ್ತು.
ಹೀಗಾಗಿ ಸಿದ್ದರಾಮಯ್ಯ ಅವರ ವಿಶೇಷ ವಿಮಾನ ಪ್ರವೇಶಕ್ಕೂ ಅನುಮತಿ ನಿರಾಕರಿಸಿದ್ದು, ಅವರು ಕೊಲ್ಲಾಪುರದತ್ತ ಪ್ರಯಾಣ ಬೆಳೆಸಿದ್ದರು. ಬೆಳಗಾವಿ ಜಿಲ್ಲೆಯ ವಿವಿಧ ಪ್ರಚಾರ ಸಭೆಗಳಲ್ಲಿ ಭಾಗವಹಿಸಬೇಕಿರುವ ಸಿದ್ದರಾಮಯ್ಯ ಅವರು ಪರ್ಯಾಯವಾಗಿ ಕೊಲ್ಲಾಪುರ ವಿಮಾನ ನಿಲ್ದಾಣದಲ್ಲಿ ಇಳಿದು, ರಸ್ತೆ ಮಾರ್ಗವಾಗಿ ಬೆಳಗಾವಿ ಜಿಲ್ಲೆ ಪ್ರವೇಶಿಸಲಿದ್ದಾರೆ.
ಎರಡನೇ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮೇ 7ರಂದು ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ದೇಶದ ನೂತನ ಪ್ರಧಾನಿಯ ಘೋಷಣೆಯಾಗಲಿದೆ. ಇದರ ನಡುವೆ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಗೆಲುವು ಸಿಗಲಿದೆ ಎಂದೇ ಕಾಂಗ್ರೆಸ್ ವಿಶ್ವಾಸದಲ್ಲಿದೆ. ಬಿಜೆಪಿ ಕೂಡ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು, 28 ಕ್ಕೆ 28 ಪಡೆಯುವ ನಂಬಿಕೆಯಲ್ಲಿದೆ.