ರಾಮ ಮಂದಿರ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ : ರಜೆ ಘೋಷಿಸದ ಬಗ್ಗೆ ಸ್ಪಷ್ಟನೆ
ಬೆಂಗಳೂರು: ಅಯೋಧ್ಯೆಯಲ್ಲಿ ಇಂದು ಪ್ರಧಾನಿ ಮೋದಿ ಅವರು ರಾಮಮಂದಿರ ಉದ್ಘಾಟನೆ ಮಾಡಿದರೆ ಇತ್ತ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಗಳ್ಳಿ ಹೋಬಳಿಯಲ್ಲಿರುವ ಹಿರಂಡಹಳ್ಳಿ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ರಾಮಮಂದಿರ ಉದ್ಘಾಟನೆ ಮಾಡಿದ್ದಾರೆ. ಶ್ರೀರಾಮ ಟೆಂಪಲ್ ಟ್ರಸ್ಟ್ ನವರು ಈ ರಾಮ ಮಂದಿರ ಉದ್ಘಾಟನೆ ಮಾಡಿದ್ದಾರೆ.
ಈ ದೇವಾಲಯದಲ್ಲಿ ಸೀತಾ-ರಾಮ, ಲಕ್ಷ್ಮಣ 33 ಅಡಿ ಆಂಜನೇಯ ದೇವಸ್ಥಾನವೂ ಇದೆ. ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ದೇವಾಲಯದಲ್ಲಿ ವಿಶೇಷ ಪೂಜೆ - ಪುನಸ್ಕಾರಗಳು ನಡೆದಿವೆ. ಇಂದು ಸಿಎಂ ಸಿದ್ದರಾಮಯ್ಯ ಅವರು ರಾಮ ಮಂದಿರ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರಿಗೆ ರಾಮ, ಲಕ್ಷ್ಮಣ, ಸೀತೆ ವಿಗ್ರಹದ ಜೊತೆಗೆ ಬಿಲ್ಕು ಬಾಣ ನೀಡಲಾಯಿತು.
ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಇದು ರಾಜಕೀಯ ಕಾರ್ಯಕ್ರಮ ಅಲ್ಲ. ಇಲ್ಲಿರುವ ರಾಮನಲ್ಲಿಯೇ ನಮ್ಮೂರಿನ ರಾಮ, ಅಯೋಧ್ಯೆಯ ರಾಮನನ್ನು ಕಾಣಬಹುದು. ಎಲ್ಲರೂ ಒಂದೇ ಅಲ್ವಾ. ಗಾಂಧೀಜಿ ಕೂಡ ರಾಮಭಕ್ತ. ನಾನು ನಾಸ್ತಿಕನಲ್ಲ, ನಾನು ಆಸ್ತಿಕನೆ. ಶ್ರೀರಾಮಚಂದ್ರನನ್ನು ಇಡೀ ದೇಶ ಪ್ರೀತಿಸುತ್ತದೆ. 143 ಕೋಟಿ ಜನ ಪ್ರೀತಿಸುತ್ತಾರೆ. ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ರಾಮನ ದೇವಸ್ಥಾನವಿದೆ. ನಮ್ಮೂರಿನಲ್ಲೂ ರಾಮನ ದೇವಸ್ಥಾನವನ್ನು ಕಟ್ಟಿಸಿದ್ದೀನಿ. ನಾವೂ ರಾಮ, ಆಂಜನೇಯನ ಭಕ್ತರು. ಯಾವತ್ತೂ ಕೂಡ ದೇವರ ಅಸ್ತಿತ್ವವನ್ನು ವಿರೋಧ ಮಾಡಿಲ್ಲ ಎಂದಿದ್ದಾರೆ.
ಇದೆ ವೇಳೆ ಶಾಲಾ-ಕಾಲೇಜಿನ ರಜೆ ಬಗ್ಗೆ ಮಾತನಾಡಿದ್ದು, ಕೇಂದ್ರ ಸರ್ಕಾರ ಎಲ್ಲಾ ಶಾಲಾ-ಕಾಲೇಜುಗಳಿಗೂ ರಜೆ ನೀಡಿದ್ಯಾ..? ಕಾರ್ಯಕ್ರಮ ನಡೆಯುತ್ತಿರುವುದು ಅಯೋಧ್ಯೆಯಲ್ಲಿ. ಆದರೆ ಕೇರಳ, ದೆಹಲಿ, ಪಶ್ಚಿಮ ಬಂಗಾಳದಲ್ಲಿ ರಜೆ ಇದ್ಯಾ..? ಎಂದು ಪ್ರಶ್ನೆ ಮಾಡುವ ಮೂಲಕ ಯಾಕೆ ರಜೆ ನೀಡಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.