ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಬಚಾವ್ : ಅಧಿಕಾರಿಗಳು ಆರಂಭದಲ್ಲಿ ಹೇಗೆ ತನಿಖೆ ಶುರು ಮಾಡುತ್ತಾರೆ..?
ಮೈಸೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಇಂದಿನಿಂದಲೇ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಲೋಕಾಯುಕ್ತ ಎಸ್ಪಿ, ಟಿಜೆ ಉದೇಶ್ ನೇತೃತ್ವದಲ್ಲಿ ನಾಲ್ಕು ತಂಡಗಳು ರಚನೆಯಾಗಿವೆ. ತನಿಖೆ ಶುರುವಾದರೂ ಕೂಡ ಸಿಎಂ ಸಿದ್ದರಾಮಯ್ಯ ಅವರಿಗೆ ಸದ್ಯ ಯಾವುದೇ ಟೆನ್ಶನ್ ಇಲ್ಲ. ಯಾಕಂದ್ರೆ ಈಗ ಲೋಕಾಯುಕ್ತ ಪೊಲೀಸರು ಆರಂಭಿಕ ಹಂತದಲ್ಲಿ ದಾಖಲೆಯ ಸಂಗ್ರಹ ಮಾಡಿಕೊಳ್ಳುತ್ತಾರೆ.
59 ಭಾಗಗಳಾಗಿ ದಾಖಲೆಗಳನ್ನು ವಿಂಗಡಿಸಲಾಗಿದೆ. ಕೆಸರೆ ಗ್ರಾಮದ ಸರ್ವೇ ನಂಬರ್ 464ರಲ್ಲಿ ಇರುವ 3 ಎಕರೆ 16 ಗುಂಟೆ ಜಮೀನಿನ ಮೂಲ ದಾಖಲೆ ಸಂಗ್ರಹದಲ್ಲಿ ಅಧಿಕಾರಿಗಳು ತೊಡಗಿದ್ದಾರೆ. 1935 ರಿಂದ ಹಿಡಿದು 2021ರವರೆಗೆ ಸಿಎಂ ಪತ್ನಿ ಪಾರ್ವತಿ ಅವರಿವೆ ಬದಲಿ ನಿವೇಶನ ಹಂಚಿಕೆಯಾಗುವವರೆಗೂ ಇರುವಂತ ದಾಖಲೆಗಳ ಸಂಗ್ರಹ ಮಾಡುತ್ತಿದ್ದಾರೆ.
ಈ ದಾಖಲೆಗಳ ಸಂಗ್ರಹವನ್ನು ಮೂಡಾ ಕಚೇರಿ, ತಹಶಿಲ್ದಾರ್ ಕಚೇರಿ,, ಸಬ್ ರಿಜಿಸ್ಟರ್ ಕಚೇರಿ ಸೇರಿದಂತೆ ಹಲವೆಡೆಯಿಂದ ಸಂಗ್ರಹ ಮಾಡಿಕೊಳ್ಳುತ್ತಾರೆ. ದಾಖಲೆಗಳ ಸಂಗ್ರಹವಾದ ಮೇಲೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಾರೆ. ಎರಡು ಆಯಾಮಗಳಲ್ಲಿ ದಾಖಲೆ ಸಂಗ್ರಹ ಮಾಡಿಕೊಳ್ಳುತ್ತಾರೆ. ಜಮೀನು ವಾರಸುದಾರರ ಮಾಹಿತಿ, ಆ ಬಳಿಕ ಸಿಎಂ, ಪತ್ನಿ ಪಾರ್ವತಿ ಹಾಗೂ ಮಲ್ಲಿಕಾರ್ಜುನ್ ಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಲಿದ್ದಾರೆ. ಸೈಟ್ ಹಂಚಿಕೆಯಾಗುವ ತನಕವೂ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ. ಅತ್ತ ಸ್ನೇಹಮಯಿ ಕೃಷ್ಣ, ಈ ಕೇಸನ್ನ ಸಿಬಿಐಗೆ ವಹಿಸುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ, ನಮ್ಮ ಅನುಮತಿ ಇಲ್ಲದೆ ಸಿಬಿಐ ಬರುವಂತೆ ಇಲ್ಲ ಎಂದು ನಿರ್ಧಾರ ಮಾಡಿದೆ.