ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವ ತನಕ ಸಿಎಂ, ಡಿಸಿಎಂ, ಗೃಹ ಸಚಿವರು ಕತ್ತೆ ಕಾಯ್ತಾ ಇದ್ರಾ..? ಪ್ರಹ್ಲಾದ್ ಜೋಶಿ ಪ್ರಶ್ನೆ...!
ಕಲಬುರಗಿ: ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಸಿಎಂ ಸಿದ್ದರಾಮಯ್ಯ ಎರಡನೇ ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪಾಸ್ ಪೋರ್ಟ್ ರದ್ದು ಪಡಿಸಿದರೆ ಅವೆಉ ದೇಶಕ್ಕೆ ವಾಪಾಸ್ ಆಗಲೇಬೇಕು. ಹೀಗಾಗಿ ವಿದೇಶಾಂಗ ಸಚಿವಾಲಯ ಮಧ್ಯ ಪ್ರವೇಶಿಸಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿದ್ದರಾಮಯ್ಯ ಮೇಲೆ ಗರಂ ಆಗಿದ್ದಾರೆ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಕೋರ್ಟ್ ನಲ್ಲಿ ಅರ್ಜಿ ಹಾಕಬೇಕು. ಅದರದ್ದೇ ಆದ ಪ್ರಕ್ರಿಯೆಗಳು ಇರುತ್ತವೆ ಎಂದಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಜಿ ಪರಮೇಶ್ವರ್ ಅವರು ನನ್ನ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಪೆನ್ ಡ್ರೈವ್ ಪ್ರಕರಣ ಹೊರಗೆ ಬಂದಿದ್ದು ಏಪ್ರಿಲ್ 21ರಂದು. ಆದರೆ ಪ್ರಜ್ವಲ್ ವಿದೇಶಕ್ಕೆ ಹೋಗಿದ್ದು, ಏಪ್ರಿಲ್ 27ಕ್ಕೆ. ಹಾಗಾದರೆ ಅಲ್ಲಿಯವರೆಗೂ ಇವರೇನು ಕತ್ತೆ ಕಾಯುತ್ತಿದ್ದರಾ..? ವಿದೇಶಕ್ಕೆ ಹೋದವರನ್ನು ಕರೆತರಲು ಪ್ರಕ್ರಿಯೆಗಳಿವೆ. ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ಕೇಂದ್ರ ತಯಾರಿದೆ. ಪತ್ರ ಬರೆದ ಕೂಡಲೇ ಪಾಸ್ ಪೋರ್ಟ್ ರದ್ದಾಗಬೇಕು ಎಂದರೆ ಹೇಗೆ..? ಈ ಪ್ರಕರಣವನ್ನು ಬಿಜೆಪಿ ಮೇಲೆ ಹಾಕುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ.
ಒಕ್ಕಲಿಗರ ಮತಗಳ ಮೇಲೆ ಕಣ್ಣಿಟ್ಟಿದ್ದು, ಚುನಾವಣೆ ಮುಗಿಯುವ ತನಕ ಏನು ಮಾಡಿಲ್ಲ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಇದೊಂದು ಗಂಭೀರ ಪ್ರಕರಣ. ಪ್ರಜ್ವಲ್ ವಿಚಾರಣೆ ಎದುರಿಸಬೇಕು. ಅವರು ತಪ್ಪು ಮಾಡಿದ್ದರೆ ಕಠಿಣ ಶಿಕ್ಷೆಯಾಗಲಿ. ಇದರಲ್ಲಿ ಯಾವುದೇ ಅನುಕಂಪ ಇಲ್ಲವೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.