ಚನ್ನಪಟ್ಟಣ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಆಶೀರ್ವಾದ ಪಡೆದು, ಡಿಕೆಶಿ ಭೇಟಿ ಮಾಡಿದ ಸಿಪಿ ಯೋಗೀಶ್ವರ್..!
ಬೆಂಗಳೂರು: ಉಪಚುನಾವಣೆಯ ರಾಜಕೀಯ ಅಖಾಡ ರಂಗೇರಿದೆ. ಜೆಡಿಎಸ್ ಹಾಗೂ ಬಿಜೆಪಿಗೆ ಸಿಪಿ ಯೋಗೀಶ್ವರ್ ಶಾಕ್ ನೀಡಿದ್ದಾರೆ. ಮೈತ್ರಿ ಪಕ್ಷದಿಂದ ಟಿಕೆಟ್ ಘೋಷಣೆಯಾಗಿದ್ದರು ಸಹ ಜೆಡಿಎಸ್ ಚಿಹ್ನೆ ಹಿಡಿಯಲು ಒಪ್ಪಿರಲಿಲ್ಲ. ಹೀಗಾಗಿ ನಿನ್ನೆ ಸಂಜೆಯ ತನಕವೂ ಬಿಜೆಪಿಗೆ ಸಮಯ ನೀಡಿದ್ದರು. ಏನು ಬದಲಾಗದ ಕಾರಣ ಸೀದಾ ಕಾರು ಹತ್ತಿ, ಬೆಳಗ್ಗೆಯೇ ಡಿಸಿಎಂ ಡಿಕೆ ಶಿವಕುಮಾರ್ ಮನೆಯ ಕದ ತಟ್ಟಿದರು.
ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೀನಿ ಎಂದು ಹೇಳಿಕೆ ನೀಡಿದ್ದ ಯೋಗೀಶ್ವರ್, ಈಗ ದಿಢೀರನೇ ಡಿಕೆ ಶಿವಕುಮಾರ್ ಭೇಟಿ ಮಾಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಾಗಾದ್ರೆ ಸಿಪಿ ಯೋಗೀಶ್ವರ್ ಕಾಂಗ್ರೆಸ್ ಸೇರುವುದು ಪಕ್ಕಾ ಎಂಬಂತೆ ಆಗಿದೆ. ಇದಾದ ಕೆಲವೇ ಹೊತ್ತಿನಲ್ಲಿ ಡಿಕೆ ಬ್ರದರ್ಸ್, ಕಾಂಗ್ರೆಸ್ ನ ಹಲವು ನಾಯಕರು, ಸಿಪಿ ಯೋಗೀಶ್ವರ್ ನೇರವಾಗಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿದ್ದಾರೆ.
ಈ ವೇಳೆ ಸಿಪಿ ಯೋಗೀಶ್ವರ್ ಅವರು ಕಾಂಗ್ರೆಸ್ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ. ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದಂತ ಬೆಳವಣಿಗೆಯಾಗಿದೆ. ಸಿಪಿ ಯೋಗೀಶ್ವರ್ ಬಿಜೆಪಿ ಪಕ್ಷದಿಂದ ಟಿಕೆಟ್ ಗಾಗಿ ಕಾಯುತ್ತಿದ್ದರು. ಆದರೆ ಬಿಜೆಪಿ ಚನ್ನಪಟ್ಟಣದ ಎಲ್ಲಾ ನಿರ್ಧಾರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟಿತ್ತು. ಇದರ ಪರಿಣಾಮ ಬಿಜೆಪಿಯಿಂದ ಟಿಕೆಟ್ ನಿರೀಕ್ಷೆ ಮಾಡಿದ್ದ ಯೋಗೀಶ್ವರ್ ಅವರಿಗೆ ನಿರಾಸೆ ಉಂಟಾಗಿತ್ತು. ಇದೀಗ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಕಾಂಗ್ರೆಸ್ ನಿಂದ ಚನ್ನಪಟ್ಟಣಕ್ಕೆ ಯಾರೂ ನಿಲ್ಲುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಇದರ ನಡುವೆ ಸಿಪಿ ಯೋಗೀಶ್ವರ್ ಗೆ ಕೊಡಬಹುದು ಎನ್ನಲಾಗಿದೆ.