ಸಿಎಂ ಸಿದ್ದರಾಮಯ್ಯ ಎದುರೇ ಡಿಕೆಶಿಯನ್ನು ಮುಖ್ಯಮಂತ್ರಿ ಮಾಡಲು ಚಂದ್ರಶೇಖರ ಸ್ವಾಮೀಜಿ ಮನವಿ..!
ಬೆಂಗಳೂರು: ಇಂದು ನಾಡಪ್ರಭು ಕೆಂಪೇಗೌಡ ಅವರ ಜಯಂತೋತ್ಸವ. ಬೆಂಗಳೂರು ಕಟ್ಟಿದ ಮಹಾತ್ಮನಿಗೆ ಇಂದು ಗೌರವ ಸಲ್ಲಿಕೆ ಮಾಡಲಾಗುತ್ತಿದೆ. ಸರ್ಕಾರ ವತಿಯಿಂದ ವಿಧಾನಸೌಧದ ಮುಂಭಾಗ ಕಾರ್ಯಕ್ರಮ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಮಠಾಧೀಶರು ಭಾಗಿಯಾಗಿದ್ದಾರೆ. ಇದೇ ವೇಳೆ ಚಂದ್ರಶೇಖರ ಸ್ವಾಮೀಜಿ ಸಿಎಂ ಹುದ್ದೆಯನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಲು ಕೇಳಿದ್ದಾರೆ.
ಕೆಂಪೇಗೌಡರ ಜಯಂತಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬೆಂಗಳೂರು ನಗರವನ್ನು ಕಟ್ಟಿದವರು. ಅವರು ಬಹಳ ಜನಾನುರಾಗುಯಾಗಿದ್ದಾರೆ. ನಗರದಲ್ಲಿ ಅನೇಕ ಕೆರೆಗಳನ್ನು ನಿರ್ಮಿಸಿ, ಬೆಂಗಳೂರನ್ನು ವ್ಯಾಪಾರ ಕೇಂದ್ರ ಮಾಡಿದ್ದು ಕೆಂಪೇಗೌಡರು. ಅನೇಕ ದೇವಸ್ಥಾನಗಳನ್ನು ಕಟ್ಟಿ ಜನಾನುರಾಗಿಯಾದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ವೇಳೆ ವೇದಿಕೆಯಲ್ಲಿಯೇ ಡಿಮ್ಯಾಂಡ್ ಇಟ್ಟ ವಿಶ್ವ ಒಕ್ಕಲಿಗ ಮಹಾಸಂಸ್ಥಾಪನಾ ಮಠದ ಚಂದ್ರಶೇಖರ ಸ್ವಾಮೀಜಿ, ಒಬ್ಬರು ಮಾತ್ರ ಸಿಎಂ ಆಗಿಲ್ಲ. ಸಿದ್ದರಾಮಯ್ಯ ಅವರು ದಯವಿಟ್ಟು ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಡಬೇಕು. ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಮಾತ್ರ ಇದೆಲ್ಲ ಸಾಧ್ಯವಾಗುತ್ತದೆ. ನಾನು ಮತ್ತೊಮ್ಮೆ ಮನವಿ ಮಾಡುತ್ತೇನೆ. ದಯವಿಟ್ಟು ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಿ. ಯಾವುದೇ ಕಾರಣಕ್ಕೂ ಬೆಂಗಳೂರನ್ನು ಭಾಗ ಮಾಡುವುದಕ್ಕೆ ಹೋಗಬೇಡಿ ಎಂದಿದ್ದಾರೆ.
135 ಸ್ಥಾನ ಪಡೆದ ಕಾಂಗ್ರೆಸ್ ಅಧಿಕಾರಕ್ಕೆ ಬರುವಾಗಲೇ ಸಿಎಂ ಸ್ಥಾನದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆರಂಭದಲ್ಲಿ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅವರು ಅಲಂಕರಿಸಿದರೆ, ಇನ್ನರ್ಧ ಡಿಕೆ ಶಿವಕುಮಾರ್ ಅವರು ಅಲಂಕರಿಸುತ್ತಾರೆ ಎಂದೇ ಚರ್ಚೆಯಾಗಿತ್ತು. ಇದೀಗ ಸ್ವಾಮೀಜಿ ಬೇರೆ ನೇರವಾಗಿ, ವೇದಿಕೆ ಮೇಲೆಯೇ ಈ ಬಗ್ಗೆ ಮಾತನಾಡಿದ್ದಾರೆ.