ಭೂತಾನ್ ನಿಂದ ಹಸಿ ಅಡಿಕೆ ಖರೀದಿಗೆ ಕೇಂದ್ರ ಅಸ್ತು : ಅಡಿಕೆ ಬೆಳೆಗಾರರಿಗೆ ಆಪತ್ತು..!
ದೇಶದಲ್ಲಿ ಹಲವೆಡೆ ಅಡಿಕೆ ಬೆಳೆಯನ್ನೇ ನಂಬಿಕೊಂಡ ರೈತರು ಇದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಅಡಿಕೆಗೆ ಒಳ್ಳೆ ಬೆಲೆ ಬಂದಿತ್ತು. ಆದರೆ ಈಗ ಮತ್ತೆ ಅಡಿಕೆ ಬೆಲೆ ಕುಸಿದಿದೆ. ಬೆಲೆ ಕಡಿಮೆಯಾಗಿರುವುದರಿಂದಾನೇ ರೈತ ಕಂಗಾಲಾಗಿರುವಾಗ ಇನ್ಯಾವುದೋ ದೇಶದಿಂದ ಅಡಿಕೆ ಆಮದು ಮಾಡಿಕೊಂಡರೆ ಹೇಗೆ ? ಕೇಂದ್ರ ಸರ್ಕಾರ ಈ ನೀತಿಯಿಂದ ಅಡಿಕೆ ಬೆಳೆಗಾರರು ಆತಂಕಗೊಂಡಿದ್ದಾರೆ. ಕೇಂದ್ರ ಸರ್ಕಾರದ ಈ ಹೊಸ ನಿರ್ಧಾರದಿಂದ ಅಡಿಕೆ ಬೆಳೆಯುವ ರೈತರಿಗೆ ಹೊಡೆತ ಬೀಳಲಿದೆ ಎನ್ನಲಾಗಿದೆ.
ಭೂತಾನ್ ನಿಂದ ಯಾವುದೇ ಷರತ್ತಿಲ್ಲದೆ 17 ಸಾವಿರ ಟನ್ ಅಡಿಕೆಯನ್ನು ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಿದೆ. ಕನಿಷ್ಠ ಆಮದು ಬೆಲೆ ಷರತ್ತಿನಲ್ಲಿ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ವ್ಯಾಪ್ತಿಯ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಒಡಿಶಾದ ಹತಿಸರ್ ಮತ್ತು ಅಸ್ಸಾಂನ ದರ್ರಂಗಾದ ಕಸ್ಟಮ್ಸ್ ಕೇಂದ್ರದ ಮೂಲಕ ಈ ಅಡಿಕೆ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ ಎನ್ನಲಾಗಿದೆ.
ಭೂತಾನ್‌ನಿಂದ ಆಮದು ಮಾಡಿಕೊಳ್ಳುವ ಅಡಿಕೆ ಪ್ರಮಾಣ ದೇಶಿಯ ಅಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ವರ್ತಕರು ಇದರ ಲಾಭ ಪಡೆದು ಸ್ಥಳೀಯವಾಗಿ ಬೆಲೆ ಕಡಿಮೆ ಮಾಡುವ ಆತಂಕ ಬೆಳೆಗಾರರಲ್ಲಿ ಇದೆ. ಇದನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆದು ರೈತರಿಗೆ ಬೆಳೆಗೆ ತಕ್ಕ ನ್ಯಾಯಯುತ ಬೆಲೆ ಕೊಡಿಸಬೇಕು ಎಂಬುದು ರೈತರ ಆಗ್ರಹವಾಗಿದೆ. 2023ರಲ್ಲಿ ಭೂತಾನ್ ಅಡಿಕೆ ಭಾರತಕ್ಕೆ ಬಂದಾಗ ಕ್ವಿಂಟಾಲ್ ಅಡಿಕೆ ದರ 4,000 ರೂಪಾಯಿವರೆಗೆ ಕುಸಿದಿದ್ದು, ಇದೀಗ ಮತ್ತೆ ದರ ಕುಸಿತದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.