ಸಿಬಿಐ ಪ್ರಕರಣ: ಯಾರ ನಾಲಿಗೆಯಲ್ಲಿ ಏನೇನಿದೆ ಅನ್ನೋದು ಈಗ ತಿಳಿಯುತ್ತಿದೆ : ಡಿಕೆ ಶಿವಕುಮಾರ್
ದೆಹಲಿ: ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಪ್ರಕರಣವನ್ನು ಹಿಂಪಡೆಯಲು ರಾಜ್ಯ ಸರ್ಕಾರ ಸಮ್ಮತಿ ನೀಡಿದೆ. ಇದಾದ ಬಳಿಕ ಬಿಜೆಪಿ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಯಾರ್ಯಾರ ಮನಸ್ಸು ಹಾಗೂ ನಾಲಿಗೆಯಲ್ಲಿ ಏನೇನು ಇದೆ ಎಂಬುದು ಈಗ ತಿಳಿಯುತ್ತಿದೆ ಎಂದಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನನ್ನ ವಿರುದ್ಧ ಪ್ರಕರಣದಲ್ಲಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ನಂತರ ಅನೇಕರು ಮಾತನಾಡುತ್ತಿದ್ದಾರೆ. ಯಾರು ಯಾರ ಮನಸ್ಸಲ್ಲಿ ಹಾಗೂ ನಾಲಿಗೆಯಲ್ಲಿ ಏನು ಇದೆ ಎಂಬುದು ಈಗ ತಿಳಿಯುತ್ತಿದೆ. ಯಾರು ಗೆಳೆಯರು..? ಅವರ ಭಾವನೆ ಏನಿದೆ..? ಎಂಬುದು ಈಗ ತಿಳಿಯುತ್ತಿದೆ. ಸಿಬಿಐ ತನಿಖೆಗೆ ಅನುಮತಿ ಹಿಂಪಡೆದಿರುವ ಬಗ್ಗೆ ಈಗ ಮಾತನಾಡುವುದಿಲ್ಲ. ಮುಂದೊಂದು ದಿನ ಖಂಡಿತವಾಗಿಯೂ ಮಾತನಾಡುತ್ತೀನಿ ಎಂದಿದ್ದಾರೆ.
ಇದೆ ವೇಳೆ ಆರ್ ಅಶೋಕ್ ಬಗ್ಗೆ ಮಾತನಾಡಿದ್ದಾರೆ. ಬೋಗಸ್ ಜನತಾ ದರ್ಶನ. ಸರ್ಕಾರ ಈಗ ಎಚ್ಚೆವಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಹೊಸದಾಗಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರಲ್ಲಿ ಜೋಶ್ ಇದೆ. ಹೊಸದಾಗಿ ಬಟ್ಟೆ ಜೋರಾಗಿ ಒಗೆಯಲಿ. ನಾವೂ ಎಲ್ಲರ ಮನಸ್ಥಿತಿ ಅರಿಯುತ್ತಿದ್ದೇವೆ ಎಂದಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಮಾತನಾಡಲು ಆಗುವುದಿಲ್ಲ. ಅವರು ಅವರದ್ದೇ ಪಕ್ಷದ ವಕ್ತಾರರಾಗಿ ಸರಿಪಡಿಸಿಕೊಳ್ಳಲಿ ಎಂದು ಆರ್ ಅಶೋಕ್ ಹೇಳಿಕೆಗೆ ಕಿಡಿಕಾರಿದ್ದಾರೆ.