ಜಾತಿ ನಿಂದನೆ ಕೇಸ್ : ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಕೋರ್ಟ್..!
ಬೆಂಗಳೂರು: ಒಕ್ಕಲಿಗ ಹಾಗೂ ದಲಿತ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಮುನಿರತ್ನ ವಿರುದ್ಧ ಕೇಸ್ ದಾಖಲಾಗಿತ್ತು. ಪರಪ್ಪನ ಅಗ್ರಹಾರ ಸೇರಿದ್ದ ಮುನಿರತ್ನ ಅವರಿಗೆ ಇದೀಗ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ನ್ಯಾಯಾಧೀಶರಾದ ಗಜಾನನ ಭಟ್ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆದಿದ್ದು, ಜಾಮೀನು ನೀಡಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಮುನಿರತ್ನ ಪರವಾಗಿ ಅವರ ವಕೀಲರಾದ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದ್ದಾರೆ. ಇದು ಏಳು ವರ್ಷದ ಹಳೆಯ ಕೇಸು. ಅದರಲ್ಲೂ ಸಾವರ್ಜನಿಕರ ಮುಂದೆ ನಡೆದ ನಿಂದನೆ ಅಲ್ಲ. ಜನಾಂಗೀಯ ನಿಂದನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಇದು ಅಟ್ರಾಸಿಟಿ ಕಾಯ್ದೆಗೆ ಅನ್ವಯವಾಗುವುದಿಲ್ಲ. ಈ ಸೆಕ್ಷನ್ ಪ್ರಕಾರ ನಿಂದನೆ ಮಾಡುವಾಗ ಇಬ್ಬರಿಗಿಂತ ಹೆಚ್ಚು ಜನ ಇರಬೇಕು. ಗುಂಪಿನಲ್ಲಿ ಜಾತಿ ನಿಂದನೆ ಮಾಡಿರಬೇಕು. ಆಗ ಅಟ್ರಾಸಿಟಿ ಕೇಸ್ ದಾಖಲಿಸಬಹುದು ಎಂದು ವಾದ ಮಂಡಿಸಿದ್ದರು.
ಇನ್ನು ಮುನಿರತ್ನ ಜಾಮೀನು ಅರ್ಜಿಗೆ ಸರ್ಕಾರಿ ವಕೀಲರಾದ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪಣೆ ಸಲ್ಲಿಸಿದ್ದರು. ಆದರೆ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಜಾಮೀನು ನೀಡುವಾಗ ಎರಡು ಶ್ಯೂರಿಟಿಗಳೊಂದಿಗೆ ಎರಡು ಲಕ್ಷ ಬಾಂಡ್ ಬರೆಸಿಕೊಂಡು ಕೋರ್ಟ್ ಜಾಮೀನು ನೀಡಿದೆ. ವಂಚನೆ, ಜಾತಿ ನಿಂದನೆ ಕೇಸ್ ಗೆ ಸದ್ಯ ಮುನಿರತ್ನ ಜಾಮೀನು ಪಡೆದಿದ್ದಾರೆ. ಇದರ ನಡುವೆ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಕೇಸ್ ಯಾವ ರೀತಿ ಟರ್ನ್ ತೆಗೆದುಕೊಳ್ಳುತ್ತೆ ಎಂಬುದನ್ನು ನೋಡಬೇಕಿದೆ.