ರಂಭಾಪುರಿ ಕಾರಿಗೆ ಚಪ್ಪಲಿ ಎಸೆದ ಕೇಸ್ : 59 ಜನರ ಮೇಲೆ ಕೇಸು ದಾಖಲು..!
ಬಾಗಲಕೋಟೆ: ಜಿಲ್ಲೆಯ ಕಲಾದಗಿ ಗ್ರಾಮದಿಂದ ತೆರಳುತ್ತಿದ್ದ ರಂಭಾಪುರಿ ಶ್ರೀಗಳ ಮೇಲೆ ಚಪ್ಪಲಿಯನ್ನು ಎಸೆದ ಘಟನೆ ನಡೆದಿತ್ತು. ಈ ಸಂಬಂಧ ಇದೀಗ 59 ಜನರ ಮೇಲೆ ಕೇಸು ದಾಖಲಾಗಿದೆ. ಕಲಾದಗಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಕಲಂ 143, 147, 341, 355, 511, 149 ನಡಿ 59 ಜನರ ಮೇಲೆ ಕೇಸು ದಾಖಲಾಗಿದೆ. ನಿನ್ನೆ ರಂಭಾಪುರಿ ಶ್ರೀಗಳು ಕಲಾದಗಿ ಗ್ರಾಮದ ಮಾರ್ಗವಾಗಿ ಉದಗಟ್ಟಿಗೆ ತೆರಳುತ್ತಿದ್ದರು. ಈ ವೇಳೆ ಕಾರಿಗೆ ಮುತ್ತಿಗೆ ಹಾಕಿದ್ದರು. ನಡುವೆಯೇ ಅವರ ಕಾರಿನ ಮೇಲೆ ಚಪ್ಪಲಿ ಎಸೆದ ಘಟನೆಯೂ ನಡೆದಿತ್ತು. ಈ ಸಂಬಂಧ ನಿನ್ನೆಯೇ ಮಾತನಾಡಿದ್ದ ರಂಭಾಪುರಿ ಶ್ರೀಗಳು ನ್ಯಾಯಾಲಯದಿಂದ ಬರುವ ತೀರ್ಪಿಗೆ ಬದ್ಧನಾಗಿರುತ್ತೇನೆ ಎಂದಿದ್ದರು.
2015ರಲ್ಲಿಕಲಾದಗಿಯ ಶ್ರೀ ಗುರುಲಿಂಗೇಶ್ವರ ಮಠದ ಅಂದಿನ ಪೀಠಾಧಿಪತಿ, ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಲಿಂಗೈಕ್ಯರಾದ ಬಳಿಕ, ನೂತನ ಪೀಠಾಧಿಪತಿ ನೇಮಕ ವಿವಾದ ಭುಗಿಲೇಳುತ್ತದೆ. ಗ್ರಾಮಸ್ಥರು ವಿದ್ವತ್ ಇರುವಂತಹ ಸ್ವಾಮೀಜಿಯನ್ನು ಪೀಠಾಧಿಪತಿ ಮಾಡಲು ಪಟ್ಟು ಹಿಡಿಯುತ್ತಾರೆ. ಆದರೆ ರಂಭಾಪುರಿ ಶ್ರೀಗಳು, ಲಿಂಗೈಕ್ಯರಾಗಿದ್ದ ಶ್ರೀ ಚಂದ್ರಶೇಖರ ಸ್ವಾಮೀಜಿಯ ತಂಗಿಯ ಮಗ ಕೆ ಎಂ ಗಂಗಾಧರ ಅವರನ್ನು ಪೀಠಾಧಿಪತಿಯನ್ನಾಗಿ ನೇಮಿಸುತ್ತಾರೆ. ಹೀಗಾಗಿ ವಿವಾದ ದೊಡ್ಡಮಟ್ಟಕ್ಕೆ ತಿರುಗಿ ಗಲಾಟೆಯೇ ನಡೆದಿದೆ. ಇದಾದ ಬಳಿಕ ಮಠದ ಪೀಠಾಧಿಪತಿ ವಿವಾದ ನ್ಯಾಯಾಲಯದ ಮೆಟ್ಟಿಲೇರುತ್ತದೆ. ಇನ್ನೂ ಕೂಡ ವಿವಾದ ಜಿಲ್ಲಾ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಸದ್ಯದ ಪೀಠಾಧಿಪತಿ ಕೆ ಎಂ ಗಂಗಾ್ದರ ಅವರು ಮಠವನ್ನು ದುರಸ್ತಿ ಮಾಡಿಸುವುದಕ್ಕೆ, ಮಠಕ್ಕೆ ಸಂಬಂಧಿಸಿದ ಹೊಲದಲ್ಲಿ ಉಳುಮೆ ಮಾಡಿಸುವುದು ಹಾಗೂ ಇತರೆ ಚಟುವಟಿಕೆಗಳನ್ನು ನಡೆಸಿದ್ದನ್ನು ವಿರೋಧಿಸಿದ್ದಾರೆ.