3 ಕ್ಷೇತ್ರಗಳ ಬೈ ಎಲೆಕ್ಷನ್.. ಶಿಗ್ಗಾವಿ, ಸಂಡೂರಿಗೆ ಬಿಜೆಪಿ ಟಿಕೆಟ್ ಘೋಷಣೆ..!
ಬೆಂಗಳೂರು, ಅಕ್ಟೋಬರ್. 19 : ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಅನೌನ್ಸ್ ಆಗಿದೆ. ಇದು ಬಿಜೆಪಿ ಹಾಗೂ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಯ ಕಣವಾಗಿದೆ. ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ರೆ, ಬಿಜೆಪಿ ಹಾಗೂ ಜೆಡಿಎಸ್ ಮೊದಲೇ ಗೆದ್ದಿದ್ದ ಚನ್ನಪಟ್ಟಣ, ಶಿಗ್ಗಾವಿಯನ್ನು ಬಿಡುವ ಮಾತೇ ಇಲ್ಲ ಎನ್ನುತ್ತಿದ್ದಾರೆ. ಇದರ ಜೊತೆಗೆ ಸಂಡೂರನ್ನು ಗೆಲ್ಲಲು ಪ್ಲ್ಯಾನ್ ರೂಪಿಸಿದ್ದು, ಜನಾರ್ದನ ರೆಡ್ಡಿ ಮುಂದೆ ನಿಂತಿದ್ದಾರೆ. ಇದರ ನಡುವೆ ಬಿಜೆಪಿ ಎರಡು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ.
ಚನ್ನಪಟ್ಟಣ ಕ್ಷೇತ್ರವನ್ನು ಬಾಕಿ ಉಳಿಸಿಕೊಂಡಿದ್ದು, ಸಂಡೂರು ಹಾಗೂ ಶಿಗ್ಗಾವಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಗೆದ್ದಿದ್ದ ಕ್ಷೇತ್ರಕ್ಕೆ ಅವರ ಕುಟುಂಬದವರಿಗೇನೆ ಟಿಕೆಟ್ ನೀಡಲಾಗಿದೆ. ಶಿಗ್ಗಾವಿ ಕ್ಷೇತ್ರಕ್ಕೆ ಬಸವರಾಜ್ ಬೊಮ್ಮಾಯಿ ಅವರ ಮಗ ಭರತ್ ಅವರನ್ನು ಕಣಕ್ಕೆ ಇಳಿಸಲಾಗುತ್ತಿದೆ. ಟಿಕೆಟ್ ಅನ್ನು ಅವರ ಮಗನಿಗೆ ಘೋಷಣೆ ಮಾಡಿದ್ದಾರೆ.
ಸಂಡೂರನ್ನು ಬಿಜೆಪಿ ತೆಕ್ಕೆಗೆ ಪಡೆಯಲೇಬೇಕೆಂದು ಜನಾರ್ದನ ರೆಡ್ಡಿ ಹೋರಾಟ ಶುರು ಮಾಡಿದ್ದಾರೆ. ಹೀಗಾಗಿಯೇ ಸಂಡೂರು ಕ್ಷೇತ್ರದ ಟಿಕೆಟ್ ಅನ್ನು ಜನಾರ್ದನ ರೆಡ್ಡಿ ಆಪ್ತರಾದ ಬಂಗಾರು ಹನುಮಂತುಗೆ ನೀಡಲಾಗಿದೆ. ಇನ್ನುಳಿದಿರುವುದು ಚನ್ನಪಟ್ಟಣ ಕ್ಷೇತ್ರ. ಕಾಂಗ್ರೆಸ್ ನಿಂದ ಡಿಕೆ ಸುರೇಶ್ ಅವರನ್ನು ಕಣಕ್ಕೆ ಇಳಿಸಲಿದ್ದಾರೆ ಎಂಬ ಮಾತಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವ ಸಾಧ್ಯತೆ ಇದೆ. ಆದರೆ ಚನ್ನಪಟ್ಟಣ ಕ್ಷೇತ್ರದಿಂದ ಸಿಪಿ ಯೋಗೀಶ್ವರ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಸಿಪಿ ಯೋಗೀಶ್ವರ್ ಅವರ ಮನವೊಲಿಸಿ, ಆ ಬಳಿಕ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ.