ವಾಣಿ ವಿಲಾಸ ಡ್ಯಾಂನಿಂದ ನೀರು ಕೊಡದಿದ್ರೆ ಲೋಕಸಭಾ ಚುನಾವಣೆಯ ಬಹಿಷ್ಕಾರ : ಎಚ್ಚರಿಕೆ ನೀಡಿದ ಹಿರಿಯೂರು ಗ್ರಾಮಸ್ಥರು
ಹಿರಿಯೂರು: ಎಷ್ಟೋ ಜಿಲ್ಲೆಗಳ ತಾಲೂಕುಗಳಲ್ಲಿ ಕೆಲವೊಂದು ಮೂಲಭೂತ ಸೌಲಭ್ಯವಿಲ್ಲದೆ ಈಗಲೂ ಒದ್ದಾಡುತ್ತಿದ್ದಾರೆ. ಚುನಾವಣೆಯ ಹೊತ್ತಲ್ಲಿ ಬಂದು ಭರವಸೆ ನೀಡಿ ಹೊರಟು ಬಿಟ್ಟರೆ ಇನ್ನು ಹಿಂತಿರುಗುವುದು ಚುನಾವಣೆ ಮುಗಿದ ಮೇಲೆಯೆ. ಈ ತರದ ಉದಾಹರಣೆಗಳು ಸಾಕಷ್ಟಿವೆ. ಇದರ ನಡುವೆ ಸದ್ಯ ಬೇಸಿಗೆ ಹೆಚ್ಚಾಗಿದೆ. ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಈಗ ಹಿರಿಯೂರು ಗ್ರಾಮಸ್ಥರು ಕುಡಿಯುವ ನೀರಿಗಾಗಿ ಬೇಡಿಕೆ ಇಟ್ಟಿದ್ದಾರೆ. ನೀರು ಕೊಡದೆ ಹೋದಲ್ಲಿ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯದಿಂದ ಭರಮಗಿರಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಕೊಡದಿದ್ದರೆ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರಿಗೆ ಗ್ರಾಮದ ಜನ ಎಚ್ಚರಿಕೆ ನೀಡಿದ್ದಾರೆ.
ವಾಣಿ ವಿಲಾಸ ಜಲಾಶಯದಿಂದ ಮೂರ್ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ನಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಗ್ರಾಮದಲ್ಲಿ ಜೆರೆ ಇದೆ. ಆದರೆ ನೀರಿಲ್ಲದೆ ಅದು ಬತ್ತಿ ಹೋಗಿದೆ. ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಅಂತರ್ಜಲ ಕುಸಿದು ಹೋಗಿದೆ. ಸಾವಿರಾರು ಅಡಿಗಳಷ್ಟು ಕೊಳವೆ ಬಾವಿ ಕೊರೆಸಿದರು ನೀರು ಸಿಗುತ್ತಿಲ್ಲ. ರೈತರು ತೋಟವನ್ನು ಉಳಿಸಿಕೊಳ್ಳಲು ಆಗದೆ ಆತ್ಮಹತ್ಯೆ ದಾರಿ ಹಿಡಿಯುವ ಪರಿಸ್ಥಿತಿ ಎದುರಾಗಿದೆ ಎಂದು ಪ್ರತಿಭಟನಾ ನಿರತ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಮಕ್ಕೆ ನೀರು ಬಿಟ್ಟರಷ್ಟೆ ಚುನಾವಣೆ ಎನ್ನುತ್ತಿದ್ದಾರೆ.