ಬಿಜೆಪಿ - ಜೆಡಿಎಸ್ ಮೈತ್ರಿ ಬ್ಯಾಕ್ ಫೈರ್ ಆಗಬಹುದು : ಸಂಸದೆ ಸುಮಲತಾ
ಮಂಡ್ಯ: ಲೋಕಸಭಾ ಚುನಾವಣೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಮಾಡಿಕೊಂಡಿರುವ ಮೈತ್ರಿ ಸ್ವತಃ ಕಾರ್ಯಕರ್ತರಿಗೇನೆ ಇಷ್ಟವಿಲ್ಲ. ಈ ಸಂಬಂಧ ಅಸಮಾಧಾನವಾನ್ನ ಈಗಾಗಲೇ ಹೊರ ಹಾಕಿದ್ದಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜೆಡಿಎಸ್ ಮೈತ್ರಿಯನ್ನು ಮುಂದುವರೆಸಿದೆ. ಇದೀಗ ಈ ಮೈತ್ರಿ ಬಗ್ಗೆ ಸಂಸದೆ ಸುಮಲತಾ ಮಾತನಾಡಿದ್ದಾರೆ.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಸುಮಲತಾ ಗೆಲುವು ಸಾಧಿಸಿ, ಸಂಸದೆಯಾದರು. ಈ ಬಾರಿಯೂ ಮಂಡ್ಯ ಕ್ಷೇತ್ರದಿಂದಾನೇ ನಿಲ್ಲುವ ಬಯಕೆ ಅವರದ್ದು. ಬಿಜೆಪಿಗೂ ಸೇರಿದ್ದಾರೆ. ಮೈತ್ರಿ ವಿಚಾರ ಈ ಮೊದಲು ಯಾರು ಯೋಚನೆ ಕೂಡ ಮಾಡಿರಲಿಲ್ಲ. ಜೆಡಿಎಸ್ ಗೆ ಮಂಡ್ಯ ಅನಿವಾರ್ಯ. ಸುಮಲತಾಗೂ ಅನಿವಾರ್ಯವಾಗಿದೆ. ಹೀಗಾಗಿ ಮೈತ್ರಿಯಲ್ಲಿ ಹೇಗೆ ಹಂಚಿಕೆ ಮಾಡಿಕೊಳ್ಳುತ್ತಾರೆ ಎಂಬುದು ಮಾತ್ರ ತಿಳಿದಿಲ್ಲ.
ಈ ಸಂಬಂಧ ಇಂದು ಮಾತನಾಡಿರುವ ಸುಮಲತಾ, ಮೈತ್ರಿಯ ಮಾತುಕತೆ ನಡೆಸುವ ಮೊದಲಾಗಲೀ ಅಥವಾ ನಂತರವಾಗಲೀ ತನ್ನನ್ನು ಯಾರೂ ಸಂಪರ್ಕಿಸಿಲ್ಲ. ಬಿಜೆಪಿಗೆ ನನ್ನ ಬೆಂಬಲ ಈಗ ಇದೆ. ಮುಂದೆಯೂ ಇರಬಹುದು. ಆದರೆ ಪಕ್ಷಕ್ಕಾಗಿ ಮೊದಲಿನಿಂದಲೂ ದುಡಿದು ಬಂದಿರುವ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ವಿಚಾರ ವಿನಿಮಯ ಮಾಡದೆ ದೋಸ್ತಿ ಬೆಳೆಸಿದ್ದು ಸೂಕ್ತವಲ್ಲ ಎಂದಿದ್ದಾರೆ.
ತನಗಿಂತಲೂ ಮೊದಲು ಬಿಜೆಪಿಗಾಗಿ ಕೆಲಸ ಮಾಡುತ್ತಾ ಬಂದಿರುವ ಶಾಸಕ ಕೆ ಸಿ ನಾರಾಯಣ ಗೌಡ ಅವರಿಗೆ ಇಲ್ಲಿನ ಜನರ ನಾಡಿಮಿಡಿತ ಚೆನ್ನಾಗಿಯೇ ಗೊತ್ತಿರುತ್ತೆ. ಜನ ಏನು ಬಯಸುತ್ತಾರೆ ಎಂಬುದನ್ನು ಅವರು ತಿಳಿದಿರುತ್ತಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈತ್ರಿ ಮಾತುಕತೆ ಮಾಡಬೇಕಿತ್ತು. ಆದರೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಾಡಿಕೊಂಡಿರುವ ಈ ಮೈತ್ರಿ ಬ್ಯಾಕ್ ಫೈಯರ್ ಆಗಬಹುದು ಎಂದಿದ್ದಾರೆ.