ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲೂ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ..!
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿರುವುದು ಗೊತ್ತೆ ಇದೆ. ಈ ಮೈತ್ರಿ ಲೋಕಸಭೆಗೆ ಮಾತ್ರ ಸೀಮಿತ ಎನ್ನಲಾಗಿತ್ತು. ಆದರೆ ಈಗ ಮೈತ್ರಿ ಬೇರೆ ಬೇರೆ ಚುನಾವಣೆಗೂ ವಿಸ್ತರಣೆಯಾಗುತ್ತಿದೆ. ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ಬಿಜೆಪಿ ಹಾಗೂ ಜೆಡಿಎಸ್ ಮೈತ್ತಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಯೋಚನೆ ಮಾಡಿದೆ.
ಫೆಬ್ರವರಿ 16ರಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಈ ಸಂಬಂಧ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಇಂದು ಮೊದಲ ಮೈತ್ರಿ ಸಭೆ ನಡೆಸಿದ್ದಾರೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಭೆ ಕರೆಯಲಾಗಿದೆ. ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಬಹುದಾದ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಚರ್ಚೆಯಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಅವರು ಮಾತನಾಡಿದ್ದು, ವಿಧಾನಪರಿಷತ್ ಗೆ ಸೀಮಿತವಾಗಿ ಎಲ್ಲರೂ ಚರ್ಚೆ ಮಾಡಿದ್ದೇವೆ. ಚರ್ಚೆಯ ವಿಚಾರ ದೆಹಲಿಗೆ ತಿಳಿಸ್ತೇವೆ. ಒಟ್ಟಾಗಿ ಚುನಾವಣೆ ಎದುರಿಸ್ತೇವೆ. ಎಂಎಲ್‌ಸಿ ಚುನಾವಣೆ ಬಂದಿದೆ. ಒಟ್ಟಾಗಿ ಎದುರಿಸ್ತೇವೆ ಎಂದಿದ್ದಾರೆ.
ಜಂಟಿ ಸಭೆ ಬಳಿಕ ಮಾತನಾಡಿದ ಕುಮಾರಸ್ವಾಮಿ, ಮುಂದೆ ಬರುವ ವಿಧಾನಪರಿಷತ್ ಚುನಾವಣೆಯ ಸಂಬಂಧ ಈ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಯಡಿಯೂರಪ್ಪ ಅವರ ಮನೆಯಲ್ಲಿ ಎರಡು ಪಕ್ಷದ ನಾಯಕರ ಜೊತೆಗೆ ಸಭೆ ನಡೆದಿದೆ. ಅಭ್ಯರ್ಥಿ ಆಯ್ಕೆಯ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಮುಂಬರುವ ಸ್ಥಳೀಯ ಚುನಾವಣೆಯಲ್ಲೂ ಜೊತೆಗೂಡಿ ಕೆಲಸ ಮಾಡುತ್ತೇವೆ. ಇಂದಿನ ಚರ್ಚೆಯ ಬಗ್ಗೆ ಹೈಕಮಾಂಡ್ ನಾಯಕರಿಗೆ ಮಾಹಿತಿ ತಲುಪಿಸುವ ಕೆಲಸ ಮಾಡುತ್ತೇವೆ. ಮೋದಿ ಅವರ ಕೈ ಬಲಪಡಿಸಲು ಒಟ್ಟಾಗಿ ಹೋಗುತ್ತೇವೆ. ರಾಜ್ಯದಲ್ಲಿ ಕೆಟ್ಟ ಸರ್ಕಾರ ಇದೆ. ಮೊದಲು ಅದು ತೊಲಗಬೇಕು ಎಂದಿದ್ದಾರೆ.