ಶಿವಮೊಗ್ಗದಲ್ಲಿ ರಾಘವೇಂದ್ರಗೆ ಭರ್ಜರಿ ಗೆಲುವು.. ಗೀತಾ ಶಿವರಾಜ್ ಕುಮಾರ್ ಗಿಂತ ಕಡಿಮೆ ಮತ ಪಡೆದರಾ ಈಶ್ವರಪ್ಪ..?
ಶಿವಮೊಗ್ಗ: ಲೋಕಸಭಾ ರಣಕಣದಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ 17 ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡರೆ ಕಾಂಗ್ರೆಸ್ 9 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. ಇನ್ನು ಜೆಡಿಎಸ್ ಸ್ಪರ್ಧಿಸಿದ್ದ ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದೆ. ಶಿವಮೊಗ್ಗದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಇತ್ತು. ಒಂದು ಕಡೆ ಬಂಡಾಯವೆದ್ದಿದ್ದ ಈಶ್ವರಪ್ಪ ಎದುರು ಬಿವೈ ರಾಘವೇಂದ್ರ ಅವರು 1.70 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಕಳೆದ ನಾಲ್ಕು ಚುನಾವಣೆಯಲ್ಲೂ ಬಿವೈ ರಾಘವೇಂದ್ರ ಅವರೇ ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. ಇಂದು ಆರಂಭಿಕ ಮತ ಎಣಿಕೆಯಿಂದಾನು ಮುನ್ನಡೆ ಕಾಯ್ದುಕೊಂಡಿದ್ದ ರಾಘವೇಂದ್ರ ಅವರು ಕಡೆಗೂ ಭರ್ಜರಿ ಗೆಲುವನ್ನೇ ಸಾಧಿಸಿದ್ದಾರೆ. ಇನ್ನು ಗೀತಾ ಶಿವರಾಜ್ ಕುಮಾರ್ ಅವರು ಎರಡನೇ ಬಾರಿಗೆ ಬಿಜೆಪಿ ಎದುರು ಸೋಲು ಕಂಡಿದ್ದಾರೆ. ಶಿವರಾಜ್ಕುಮಾರ್ ಸೇರಿದಂತೆ ಸ್ಯಾಂಡಲ್ ವುಡ್ ನಟ ನಟಿಯರು ಕೂಡ ಬಂದು ಮತ ಕೇಳಿದ್ದರು. ಆದರೂ ಗೀತಾ ಶಿವ ರಾಜ್‍ಕುಮಾರ್ 404570 ಮತಗಳನ್ನು ಪಡೆಯುವ ಮೂಲಕ ಸೋಲು ಕಂಡಿದ್ದಾರೆ.
ಇನ್ನು ಈ ಬಾರಿ ಮಗನಿಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಕೆ.ಎಸ್.ಈಶ್ವರಪ್ಪ ಅವರು ಪಕ್ಷದ ವಿರುದ್ದವೇ ಬಂಡಾಯವೆದ್ದಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಬಿಜೆಪಿ ಕೂಡ ಈಶ್ವರಪ್ಪ ಅವರನ್ನು ಪಕ್ಷದಿಂದ ವಜಾ ಮಾಡಿತ್ತು. ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ದಂಗೆ ಎದ್ದಿದ್ದ ಈಶ್ವರಪ್ಪ, ಬಿಎಸ್ವೈ ಪುತ್ರನ ವಿರುದ್ಧವೇ ಸೋತಿದ್ದಾರೆ. ಅದರಲ್ಲೂ ಗೀತ ಶಿವರಾಜ್ ಕುಮಾರ್ ಅವರಿಗಿಂತ ಕಡಿಮೆ ಮತಗಳಿಂದ ಸೋತಿದ್ದಾರೆ. ಈಶ್ವರಪ್ಪ ಅವರಿಗೆ ಬಿದ್ದ ಮತಗಳು ಕೇವಲ 21,920 ಮಾತ್ರ.