ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್ : ಹೈಕೋರ್ಟ್ ನಿಂದ ಮಹತ್ವದ ಆದೇಶ
ಬೆಂಗಳೂರು: ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಲಂಚದ ಆರೋಪದ ಮೇಲೆ ಲೋಕಾಯುಕ್ತ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ವಿರೂಪಾಕ್ಷಪ್ಪ ವಿರುದ್ಧ ದಾಖಲಾಗಿದ್ದ ದೂರನ್ನು ರದ್ದುಗೊಳಿಸಿ, ಹೈಕೋರ್ಟ್ ಆದೇಶ ಹೊರಡಿಸಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಾಳು ವಿರೂಪಾಕ್ಷಪ್ಪ KSDL ಅಧ್ಯಕ್ಷ ಹುದ್ದೆಯಲ್ಲಿ ಇದ್ದರು. ಈ ವೇಳೆ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ನಲ್ಲಿ ಭಾರೀ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಸ್ಪೀಕರ್ ಅವರ ಅನುಮತಿ ಪಡೆಯದೆನೆ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಹೀಗಾಗಿ ತಾಂತ್ರಿಕ ಕಾರಣದಿಂದಾಗಿ ಏಕಸದಸ್ಯ ಪೀಠ, ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಇದ್ದ ಕೇಸನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ಇದೇ ಪ್ರಕರಣದಲ್ಲಿ ಮಾಡಾಳು ಪುತ್ರನಿಗೂ ಸಂಕಷ್ಟ ಎದುರಾಗಿತ್ತು. ಇದೇ ಕೇಸಲ್ಲಿ ಮಾಡಾಳು ವಿರೂಪಾಕ್ಷಪ್ಪ ಜೈಲು ಕೂಡ ಸೇರಿದ್ದರು. ಆದರೆ ಹೈಕೋರ್ಟ್ ಮಾಡಾಳು ವಿರೂಪಾಕ್ಷಪ್ಪ ಅವರ ಕೇಸನ್ನು ಮಾತ್ರ ರದ್ದು ಮಾಡಿದೆ. ಉಳಿದಂತೆ ಅವರ ಪುತ್ರನ ಕೇಸ್ ಹಾಗೆಯೇ ಇದೆ. ವಿರೂಪಾಕ್ಷಪ್ಪ ಪುತ್ರ ಸೇರಿದಂತೆ ಹಲವು ಆರೋಪಿಗಳ ಮೇಲಿನ ಪ್ರಕರಣ ಹಾಗೆಯೇ ಇದೆ.
ಇನ್ನು ವಿರೂಪಾಕ್ಷಪ್ಪ ಅವರು ಅರೆಸ್ಟ್ ಆದ ಮೇಲೆ ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿತ್ತು. ಸಿಕ್ಕ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆಯೂ ಜೈಲಿಂದ ಬಂದ ಬಳಿಕ ವಿರೂಪಾಕ್ಷಪ್ಪ ಅವರು ಹೇಳಿದ್ದರು. ನಮ್ಮ ತಾಲೂಕನ್ನು ಅಡಿಕೆ ನಾಡು ಚನ್ನಗಿರಿ ಅಂತ ಹೇಳುತ್ತಾರೆ. ಅಡಿಕೆ ನಾಡಿನಲ್ಲಿ ಸಾಮಾನ್ಯ ತೋಟದ ಮಾಲೀಕರನ ಮನೆಯಲ್ಲಿ ಕಡಿಮೆ ಎಂದರೂ ಎರಡರಿಂದ ಮೂರು ಕೋಟಿ ರೂಪಾಯಿ ಹಣ ಇರುತ್ತೆ. ನಮ್ಮ ಮನೆಯಲ್ಲಿ 125 ಎಕರೆ ಅಡಿಕೆ ತೋಟ ಇದೆ, 2 ಕ್ರಷರ್ಗಳಿದೆ. ಇದರೊಂದಿಗೆ ಎರಡು ಅಡಕೆ ಮಂಡಿಯನ್ನು ಹೊಂದಿದ್ದೇವೆ. ಬೇರೆ ಬೇರೆ ವ್ಯವಹಾರಗಳನ್ನು ಮಾಡುತ್ತಿದ್ದೇವೆ. ಈಗ ಸಿಕ್ಕಿರುವ ಹಣಕ್ಕೆ ಸೂಕ್ತ ದಾಖಲೆ ಕೊಟ್ಟು ಹಣ ವಾಪಸ್ ಪಡೆದುಕೊಳ್ಳುತ್ತೇನೆ ಎಂದಿದ್ದರು.