ಸಿಎಂ ಹಾಗೂ ಡಿಸಿಎಂಗೆ ಕೋರ್ಟ್ ನಿಂದ ಬಿಗ್ ರಿಲೀಫ್..!
ಬೆಂಗಳೂರು: ಇಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಂತಸದ ದಿನ. ಸಿಎಂ ಹಾಗೂ ಡಿಸಿಎಂ ಪ್ರಕರಣದಲ್ಲಿ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಗವರ್ನರ್ ಆದೇಶವನ್ನು ರದ್ದುಗೊಳಿಸಲು ಸಿದ್ದರಾಮಯ್ಯ ಕೋರಿದ್ದರು. ಹೈಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಿದ ಕೋರ್ಟ್ ರಿಲೀಫ್ ನೀಡಿದೆ.
ನ್ಯಾ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತ್ತು. ಸಿದ್ದರಾಮಯ್ಯ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್ ನ್ಯಾಯಾಧೀಶರು ಶನಿವಾರದ ತನಕ ಅಂದರೆ ಆಗಸ್ಟ್ 31ಕ್ಕೆ ಮುಂದೂಡಿದೆ.
ಇದೇ ದಿನ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ರಿಲೀಫ್ ಸಿಕ್ಕಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ಮತ್ತು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಹಿಂಪಡೆದಿತ್ತು. ಸಚಿವ ಸಂಪುಟದ ಆದೇಶವನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇಂದಿಗೆ ಕಾಯ್ದಿರಿಸಿತ್ತು. ಹೈಕೋರ್ಟ್ ವಿಭಾಗೀಯ ಪೀಠದ ನ್ಯಾ.ಕೆ.ಸೋಮಶೇಖರ್ ಮತ್ತು ನ್ಯಾ.ಉಮೇಶ್ ಅವರ ಪೀಠ ಇಂದು ಸಿಬಿಐ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ಆದೇಶ ನೀಡಿದೆ. ಈ ಮೂಲಕ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ. ಸದ್ಯ ಸಿಎಂ ಸಿದ್ದರಾಮಯ್ಯ ಅವರ ಪ್ರಕರಣ ಸಂಬಂಧ ಶನಿವಾರ ಮತ್ತೆ ವಿಚಾರಣೆ ನಡೆಯಲಿದೆ.