ಗೃಹಜ್ಯೋತಿ ನಿಯಮದಲ್ಲಿ ದೊಡ್ಡ ಬದಲಾವಣೆ : ಏನದು ಗೊತ್ತ..?
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ ಅನುಕೂಲವಾಗಲೆಂದು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಗೃಹಜ್ಯೋತಿ ಯೋಜನೆಯೂ ಕೂಡ ಒಂದು. ಇದೀಗ ಆ ಯೋಜನೆಯಲ್ಲಿ ಮಹತ್ವದ ಬದಲಾವಣೆಯೊಂದು ಆಗಿದೆ. ಈ ಮೊದಲು ಶೇಕಡವಾರು 10 ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ಈಗ ಅದರಲ್ಲಿ ಬದಲಾವಣೆಯಾಗಿದೆ.
ಈ ಸಂಬಂಧ ಮಾಹಿತಿ ನೀಡಿರುವ ಸಚಿವ ಹೆಚ್. ಕೆ. ಪಾಟೀಲ್, ಈ ಮೊದಲು ಗೃಹಜ್ಯೋತಿ ಯೋಜನೆಯಡಿ ಬಳಸಿದ ಯುನಿಟ್ ಗಿಂತ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗಿತ್ತು. ಇದೀಗ ಶೇಕಡವಾರು ಬದಲಾಗಿ 10 ಯುನಿಟ್ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಜನವರಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದೆ.
ಕರ್ನಾಟಕ ವಿದ್ಯುತ್ ನಿಗಮ ಪಡೆದಿದ್ದ 4450 ಕೋಟಿ ರೂಪಾಯಿ ಸಾಲಕ್ಕೆ ಸರ್ಕಾರಿ ಖಾತರಿ ನೀಡಲು, ಸಂಪುಟ ನಿರ್ಧರಿಸಿದೆ. ಹಲವು ವರ್ಷಗಳಿಂದ ಪಡೆದಿದ್ದ ಸಾಲಕ್ಕೆ ಒಳಹರಿವಿನ ಕೊರತೆಯಿದೆ. ಶ್ಯೂರಿಟಿ ನೀಡಬೇಕೆಂದು ಸರ್ಕಾರಕ್ಕೆ ವಿದ್ಯುತ್ ನಿಗಮ ಮನವಿ ಮಾಡಿತ್ತು. ಹೀಗಾಗಿ ಸರ್ಕಾರ 4450 ಕೋಟಿ ರೂಪಾಯಿ ಸಾಲಕ್ಕೆ ಖಾತರಿ ನೀಡಲು ತೀರ್ಮಾನ ಮಾಡಿದೆ. ವಿದ್ಯುತ್ ಸರಬರಾಜು ಕಂಪನಿಗಳು ಯುಪಿಸಿಎಲ್ ನವರಿಗೆ ಪಾವತಿಸಬೇಕಾದ ವಿವಾದಿತ ಮೊತ್ತದ ಕುರಿತು ಚರ್ಚೆಯಾಗಿದೆ. ಹಾಗೇ ಸೆಂಟ್ರಲ್ ಇಆರ್ಸಿಯವರ ಆದೇಶದ ಕುರಿತು ಚರ್ಚೆಯಾಗಿದ್ದು, ವಿವಿಧ ಭಿನ್ನ ಕಾನೂನು ಅಭಿಪ್ರಾಯಗಳು ವ್ಯಕ್ತವಾಗಿದೆ ಎಂದಿದ್ದಾರೆ.