ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿಕೆ..!
ಬೆಂಗಳೂರು: ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಅವರಿಗೂ ಬಂಧನದ ಭೀತಿ ಎದುರಾಗಿತ್ತು. ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆಯಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಪ್ರಜ್ವಲ್ ರೇವಣ್ಣ ಕೂಡ ಸೋಮವಾರ ವಿಡಿಯೋ ಮೂಲಕ, ನಾನು 31ಕ್ಕೆ ಎಸ್ಐಟಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಬಂಧನದ ಭೀತಿ ಎದುರಾಗಿದ್ದು, ಭವಾನಿ ರೇವಣ್ಣ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಎಸ್ಪಿಪಿಗೆ ಆಕ್ಷೇಪಣೆ ಸಲ್ಲಿಸಲು ನೋಟೀಸ್ ನೀಡಿದ್ದರು. ಭವಾನಿ ರೇವಣ್ಣ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದರು. ಈ ಪ್ರಕರಣದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ಅರ್ಹವಾಗಿದೆ. ಆಕ್ಷೇಪಣೆ ಸಲ್ಲಿಸುವವರೆಗೂ ಬಂಧನದಿಂದ ರಕ್ಷಣೆ ನೀಡಬೇಕು. ಇವತ್ತು ಬಂಧನ ಮಾಡಿದರೆ ಏನು ಮಾಡಲು ಆಗುತ್ತದೆ. ಹೀಗಾಗಿ ನನ್ನ ಕಕ್ಷಿದಾರರಿಗೆ ಕಾನೂನು ರಕ್ಷಣೆ ಕೊಡಬೇಕು ಎಂದು ವಕೀಲರು ಮನವಿ ಮಾಡಿದರು.
ಇನ್ನು ಎಸ್ಐಟಿ ಅಧಿಕಾರಿಗಳು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದರು. ವಾದ - ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಕೇಸಿಗೆ ಸಂಬಂಧಿಸಿದಂತೆಯೇ ಇಂದು ಎಸ್ಐಟಿ ಇಬ್ಬರನ್ನು ವಶಕ್ಕೆ ಪಡೆದಿದೆ. ಈಗಾಗಲೇ ನಾಲ್ವರು ಅರೋಪಿಗಳಿದ್ದು, ಅದರಲ್ಲಿ ಚೇತನ್ ಹಾಗೂ ನವೀನ್ ಗೌಡ ಜಾಮೀನು ಅರ್ಜಿ ವಿಚಾರಣೆಗೆಂದು ಹೈಕೋರ್ಟ್ ಗೆ ಬಂದಿದ್ದರು. ಈ ವೇಳೆ ಎಸ್ಐಟಿ ಅವರನ್ನು ವಶಕ್ಕೆ ಪಡೆದಿದೆ. ಜೂನ್ 3ಕ್ಕೆ ನಾಲ್ವರು ಆರೋಪಿಗಳ ಅರ್ಜಿ ವಿಚಾರಣೆಗೆ ಬರಲಿದೆ.