ಅಕ್ಟೋಬರ್ 5, 6ಕ್ಕೆ ಬೆಸ್ಕಾಂ ಸಾಫ್ಟ್‌ವೇರ್ ಉನ್ನತೀಕರಣ : ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ..!
ಬೆಂಗಳೂರು, 29 ಸೆಪ್ಟೆಂಬರ್ 2024 : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆಯಲ್ಲಿ ಆನ್‌ಲೈನ್ ಸೇವೆಗಳು ಅಕ್ಟೋಬರ್ 5, 6 ರಂದು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಐಟಿ ಅಪ್ಲಿಕೇಶನ್‌ಗಳ ಉನ್ನತೀಕರಣಕ್ಕೆ ಸಮಯ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಅಪ್ಲಿಕೇಶನ್ ಸೇವೆಗಳು ಅಕ್ಟೋಬರ್ 5, 6 ರಂದು ಲಭ್ಯ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಐಪಿಡಿಎಸ್ ಐಟಿ ಹಂತ-2ರ ಯೋಜನೆಯ ಭಾಗವಾಗಿ ಆರ್‌ಎಪಿಡಿಆರ್‌ಪಿ ಅಪ್ಲಿಕೇಷನ್ ಸೇವೆ ಲಭ್ಯ ಇರುವುದಿಲ್ಲ. ಸಿಸ್ಟಂ ಡೌನ್‌ಟೈಮ್ ಅಕ್ಟೋಬರ್ 4ರ ರಾತ್ರಿ 9ರಿಂದ ಆರಂಭವಾಗಿ 7ರ ಬೆಳಗ್ಗೆ 6ಕ್ಕೆ ಕೊನೆಗೊಳ್ಳುತ್ತದೆ.
ಐಟಿ ಮೂಲಸೌಕರ್ಯ ವರ್ಧನೆ ಮತ್ತು ಕಾರ್ಯಾಚರಣೆ ಪ್ರದೇಶಗಳಲ್ಲಿ ಸೇವೆಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬೆಸ್ಕಾಂ ಈ ಕಾರ್ಯ ಕೈಗೊಂಡಿದೆ.
2024ರ ಮಾರ್ಚ್ 20 ರಂದು ಬಿಐಪಿ ಮತ್ತು ಡಬ್ಲ್ಯುಎಸ್‌ಎಸ್‌ಗೆ ನವೀಕರಣಗಳೊಂದಿಗೆ ಒರಾಕಲ್ ಸಿಸಿಬಿಯನ್ನು ಆವೃತ್ತಿ 2.3 ರಿಂದ 2.8 ಕ್ಕೆ ಯಶಸ್ವಿಯಾಗಿ ಅಪ್‌ಗ್ರೇಡ್ ಮಾಡುವುದರೊಂದಿಗೆ ಹಂತ-1 ಅನ್ನು ಹಂತ ಹಂತವಾಗಿ ನವೀಕರಿಸಲಾಗಿದೆ.
ಮುಂಬರುವ ಹಂತ-2ರಲ್ಲಿ, ಇಎಎಂ, ಜಿಐಎಸ್, ಐಡಿಎಎಂ, ಇಎಎಸ್ ಮಾಸ್ಟರ್ ಡೇಟಾ ನಿರ್ವಹಣೆ ಮತ್ತು ಮೊಬೈಲ್ ಅಪ್ಲಿಕೇಶನ್‌ಗೆ ಸಂಬಂಧಿಸಿದ ಅಪ್‌ಗ್ರೇಡ್ ಮಾಡಿದ ಅಪ್ಲಿಕೇಶನ್‌ಗಳು ರೋಲ್‌ಔಟ್ ಆಗಲಿದ್ದು, ಅಕ್ಟೋಬರ್ 7ರಿಂದ ಕಾರ್ಯಾಚರಣೆಗೆ ಮುಕ್ತವಾಗಲಿವೆ ಎಂದು ಬೆಸ್ಕಾಂ ಹೇಳಿದೆ.
"30,000 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣಗಳನ್ನು ಒಳಗೊಂಡಿರುವ ರಾಜ್ಯದ ಎಲ್ಲಾ ಎಸ್ಕಾಂಗಳಿಗೆ ಭಾಗ-ಎ ಐಟಿ ಯೋಜನೆಯ ಅನುಷ್ಠಾನಕ್ಕೆ ಬೆಸ್ಕಾಂ ನೋಡಲ್ ಏಜೆನ್ಸಿಯಾಗಿದೆ. ಹೊಸ ಅಪ್ಲಿಕೇಶನ್‌ಗಳು ಅಕ್ಟೋಬರ್ 7ರ ಬೆಳಗ್ಗೆ 6ರವರೆಗೆ ಕಾರ್ಯನಿರ್ವಹಿಸಿದ ನಂತರ ಅಪ್ಲಿಕೇಶನ್ ದಕ್ಷತೆ ಹೆಚ್ಚಲಿದೆ. ಇದರಿಂದಾಗಿ, ಬಳಕೆದಾರರಿಗೂ ಉತ್ತಮ ಸೇವೆ ಲಭ್ಯವಾಗಲಿದೆ," ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
"ಸುಗಮ ಸ್ಥಿತ್ಯಂತರದ ಖಾತರಿಗಾಗಿ ಕ್ಷೇತ್ರ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ಎಸ್ಕಾಂ ಅಧಿಕಾರಿಗಳಿಗೂ ಹೆಚ್ಚುವರಿ ತರಬೇತಿ ನಡೆದಿದೆ," ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಸ್ಥಗಿತದ ಸಮಯದಲ್ಲಿ ಈ ಸೇವೆಗಳು ಅಲಭ್ಯ :
1. ಹೊಸ ಸಂಪರ್ಕಗಳ ಪ್ರಕ್ರಿಯೆ, ಹೆಸರು ಮತ್ತು ಸುಂಕ ಬದಲಾವಣೆಗಳು, ಹೆಸರು ವರ್ಗಾವಣೆ ಮತ್ತು ತಾತ್ಕಾಲಿಕ ಸಂಪರ್ಕಗಳಂತಹ ಕಾರ್ಯಾಚರಣೆಗಳಿಗೆ 'ಆರ್‌ಎಪಿಡಿಆರ್‌ಪಿ' ಅಪ್ಲಿಕೇಶನ್ ಲಭ್ಯವಿರುವುದಿಲ್ಲ.
2. ಬೆಸ್ಕಾಂ ಕ್ಯಾಶ್ ಕೌಂಟರ್‌ಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ.
3. ಹೊಸ ಸಂಪರ್ಕಗಳು, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಸೇವೆಗಳಿಗಾಗಿ ಗ್ರಾಹಕ ಪೋರ್ಟಲ್ ಲಭ್ಯವಿರುವುದಿಲ್ಲ.
4. ಗ್ರಾಹಕ ಪೋರ್ಟಲ್ ಮತ್ತು ಥರ್ಡ್ ಪಾರ್ಟಿ ಪಾವತಿ ಚಾನಲ್‌ಗಳ ಮೂಲಕ ಆನ್‌ಲೈನ್ ಬಿಲ್ ಪಾವತಿಗಳು ಅಕ್ಟೋಬರ್ 4ರ ರಾತ್ರಿ 9ರಿಂದ ಅಕ್ಟೋಬರ್ 5ರ ಬೆಳಗ್ಗೆ 11ರವರೆಗೆ ಲಭ್ಯವಿರುವುದಿಲ್ಲ. ಅಕ್ಟೋಬರ್ 5ರ ಬೆಳಗ್ಗೆ 11ರ ನಂತರ ಬಿಲ್ ಪಾವತಿ ಕಾರ್ಯವನ್ನು ಮಾತ್ರ ಪುನರಾರಂಭಿಸಲಾಗುತ್ತದೆ.
5. 'ಆರ್‌ಎಪಿಡಿಆರ್‌ಪಿ' ಸೇವೆ ಇಲ್ಲದ ಕಾರಣ, ಮೊಬೈಲ್ ಅಪ್ಲಿಕೇಶನ್‌ಗಳ ಸೇವೆಯೂ ಅಲಭ್ಯ.
6. ಡಬ್ಲ್ಯುಎಎಂಎಸ್ ಮೂಲಕ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುತ್ತದೆ.
ಯಾವ ನಗರಗಳಲ್ಲಿ ಆನ್‌ಲೈನ್ ಸೇವೆ ಇರುವುದಿಲ್ಲ?
ಬೆಸ್ಕಾಂ: ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಸಿರಾ, ಚನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್, ಹರಪ್ಪನಹಳ್ಳಿ, ಹರಿಹರ, ಹಿರಿಯೂರು, ತಿಪಟೂರು ಹಾಗೂ ಗೌರಿಬಿದನೂರು.
ಹೆಚ್ಚಿನ ಮಾಹಿತಿಗಾಗಿ, ಗ್ರಾಹಕರು ಬೆಸ್ಕಾಂ ಸಹಾಯವಾಣಿ 1912 ಸಂಪರ್ಕಿಸಬಹುದು ಅಥವಾ ಬೆಸ್ಕಾಂ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.