ಬೆಳಗಾವಿ ಅಧಿವೇಶನ ಆರಂಭ : ಜಿಲ್ಲಾಡಳಿತದಿಂದ ಯಡವಟ್ಟು.. ಕುಮಾರಸ್ವಾಮಿ, ಬೊಮ್ಮಾಯಿ ಅವರಿಗೆ ಖುರ್ಚಿ ಮೀಸಲು..!
ಬೆಳಗಾವಿ: ಸುವರ್ಣ ಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಆದರೆ ಈ ವೇಳೆ ಬೆಳಗಾವಿ ಜಿಲ್ಲಾಡಳಿತ ನಗೆಪಾಟಲಿಗೆ ಗುರಿಯಾಗಿದೆ. ಯಾಕಂದ್ರೆ ಇಬ್ಬರು ಮಾಜಿ ಶಾಸಕರಿಗೆ ಆಸನ ಮೀಸಲಿಟ್ಟಿದೆ. ಈ ವಿಚಾರ ಬಾರೀ ಚರ್ಚೆಗೆ ಗ್ರಾಸವಾಗಿದ್ದು, ಬೆಳಗಾವಿ ಜಿಲ್ಲಾಡಳಿತ ನಗೆಪಾಟಲಿಗೆ ಗುರಿಯಾಗಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಅವರಿಗೆ ಆಸನವನ್ನು ಮೀಸಲಿರಿಸಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಗೆದ್ದು ಇಬ್ಬರು ನಾಯಕರು ಸಂಸದರಾದ ಮೇಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೂರು ಕ್ಷೇತ್ರಗಳ ಉಪಚುನಾವಣೆಯೂ ನಡೆದು, ಮೂರರಲ್ಲೂ ಕಾಂಗ್ರೆಸ್ ಗೆದ್ದಿದೆ. ಹೊಸ ಶಾಸಕರಿಗೆ ಆಸನವನ್ನು ಮೀಸಲಿರಿಸಬೇಕಾದದ್ದು ಬಿಟ್ಟು ಮಾಜಿ ಶಾಸಕರಿಗೆ ಆಸನ ಮೀಸಲಿರಿಸಿ, ನಗೆ ಪಾಟಲಿಗೆ ಗುರಿಯಾಗಿದೆ. ಬೆಳಗಾವಿ ಅಧಿವೇಶನಕ್ಕೆ ಕಳೆದ ಒಂದು ತಿಂಗಳಿನಿಂದ ತಯಾರಿ ಮಾಡಿಕೊಳ್ಳಲಾಗಿದೆ. ಆದರೂ ಜಿಲ್ಲಾಡಳಿತ ಈ ರೀತಿಯ ಯಡವಟ್ಟು ಮಾಡಿದೆ. ಮಾಜಿ ಶಾಸಕರ ಹೆಸರನ್ನು ತೆಗೆದು, ಹೊಸ ಶಾಸಕರ ಹೆಸರನ್ನು ಹಾಕಬೇಕಿತ್ತುಮ
ಇನ್ನು ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮೂವರು ಶಾಸಕರು ಗೆದ್ದು ಬೀಗಿದ್ದಾರೆ. ಮೂವರು ಕೂಡ ಇಂದೇ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ. ಶಿಗ್ಗಾಂವಿಯ ಯಾಸೀರ್ ಖಾನ್ ಪಠಾಣ್, ಸಂಡೂರಿನ ಅನ್ನಪೂರ್ಣ ತುಕರಾಂ, ಚನ್ನಪಟ್ಟಣದ ಸಿಪಿ ಯೋಗೀಶ್ವರ್ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲು ವೇದಿಕೆ ಸಿದ್ಧವಾಗಿದೆ. ಇನ್ನು ಈ ಬಾರಿಯಾದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಮುಂದಾಗುತ್ತಾರಾ..? ಹೆಚ್ಚಿನ ಚರ್ಚೆಗೆ ಅವಕಾಶ ಸಿಗುತ್ತಾ ಎಂಬುದನ್ನ ನೋಡಬೇಕಿದೆ. ಉತ್ತರ ಕರ್ನಾಟಕ ಮಂದಿಯೂ ಅದೇ ನಿರೀಕ್ಷೆಯಲ್ಲಿದ್ದಾರೆ.