ಬೆಳ್ಳುಳ್ಳಿ ತೆಗೆದುಕೊಳ್ಳುವಾಗ ಎಚ್ಚರ : ಬ್ಯಾನ್ ಆಗಿದ್ರು ಚೀನಾದಿಂದ ಬರ್ತಿದೆ ಬೆಳ್ಳುಳ್ಳಿ..!
ಅಡುಗೆ ಮಾಡಲು ಬೆಳ್ಳುಳ್ಳಿ ಇರಲೇಬೇಕು. ಆದರೆ ಬೆಳ್ಳುಳ್ಳಿ ತೆಗೆದುಕೊಳ್ಳುವಾಗ ಬಹಳ ಎಚ್ಚರಿಕೆ ಇರಬೇಕಾಗುತ್ತದೆ. ಯಾಕಂದ್ರೆ ನಾವೂ ಕೊಳ್ಳುವ ಬೆಳ್ಳುಳ್ಳಿ ಮಾರಕವಾಗಿರಬಹುದು. ಕ್ಯಾನ್ಸರ್ ಕೂಡ ಬರಬಹುದು. ಚೀನಾದಿಂದ ನಿಷೇಧವಾದ ಬೆಳ್ಳುಳ್ಳಿ ದೇಶಕ್ಕೆ ಬರುತ್ತಿದ್ದು, ಆ ಬೆಳ್ಳುಳ್ಳಿ ಸೇವನೆಯಿಂದ ಕ್ಯಾನ್ಸರ್ ಬರಲಿದೆ ಎನ್ನಲಾಗಿದೆ.
ಬೆಳ್ಳುಳ್ಳಿ ಉತ್ಪಾದನೆಯಲ್ಲಿ ಚೀನಾ ದೇಶ ಅತಿ ದೊಡ್ಡ ದೇಶವಾಗಿದೆ. ಜಾಗತಿಕ ಪೂರೈಕೆಯಲ್ಲಿ ಶೇಕಡ 80ರಷ್ಟು ಚೀನಾವೇ ಉತ್ಪಾದನೆ ಮಾಡಲಿದೆ. ಚೀನಾದ ಹೆಚ್ಚಿನ ಬೆಳ್ಳುಳ್ಳಿಯನ್ನು ಬೀಜಿಂಗ್ ನ ಆಗ್ನೇಯ ಭಾಗದಲ್ಲಿರುವ ಪೂರ್ವ ಕರಾವಳಿ ಪ್ರಾಂತ್ಯವಾದ ಶಾಂಡೊಂಗ್ ನಲ್ಲಿ ಉತ್ಪಾದಿಸಲಾಗುತ್ತಿದೆ. ಚೀನಾದ ಬೆಳ್ಳುಳ್ಳಿ ಭಾರತಕ್ಕೂ ಬರುತ್ತಿತ್ತು. ಆದರೆ 2014ರಲ್ಲಿಯೇ ಚೀನಾದ ಬೆಳ್ಳುಳ್ಳಿಯನ್ನು ನಿಷೇಧಿಸಲಾಗಿದೆ.
ಆದರೂ ಚೀನಾ ಬೆಳ್ಳುಳ್ಳಿ ಕಳ್ಳದಾರಿಯಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಹೀಗಾಗಿ ಬೆಳ್ಳುಳ್ಳಿ ತೆಗೆದುಕೊಳ್ಳುವಾಗ ಸರಿಯಾಗಿ ಗಮನ ಹರಿಸಿ ನೋಡಿ ತೆಗೆದುಕೊಳ್ಳಿ. ಚೀನಾದ ಬೆಳ್ಳುಳ್ಳಿ ತಿಳಿಯಾದ ಬಿಳಿ ಬಣ್ಣ ಹಾಗೂ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಹಾಗೇ ನೋಡುವುದಕ್ಕೂ ಸಣ್ಣ ಪ್ರಮಾಣವನ್ನು ಹೊಂದಿರುತ್ತದೆ. ವಾಸನೆಯಲ್ಲೂ ಅಷ್ಟೇ ಕಡಿಮೆ ವಾಸನೆಯನ್ನು ಹೊಂದಿರುತ್ತೆ. ಈ ಬೆಳ್ಳುಳ್ಳಿಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿದೆ.
ಆದರೆ ನಮ್ಮ ಭಾರತೀಯ ಬೆಳ್ಳುಳ್ಳಿ ಗಾತ್ರದಲ್ಲೂ ದೊಡ್ಡದು, ವಾಸನೆಯಲ್ಲೂ ಸುವಾಸನೆ ಬೀರುತ್ತದೆ. ನಮ್ಮ ಭಾರತದ ಬೆಳ್ಳುಳ್ಳಿ ಬಳಕೆಗೂ ಯೋಗ್ಯ, ಆರೋಗ್ಯಕ್ಕೂ ಸುರಕ್ಷಿತವಾಗಿದೆ. ಚೀನಾದಲ್ಲಿ ಬೆಳ್ಳುಳ್ಳಿ ಬೆಳೆಯುವಾಗಲೇ ಅತಿ ಹೆಚ್ಚು ಕೀಟನಾಶಕ, ಅತಿ ಹೆಚ್ಚು ರಾಸಾಯನಿಕ ವಸ್ತುಗಳ ಬಳಕೆ ಮಾಡಿ ಬೆಳ್ಳುಳ್ಳಿ ಬೆಳೆಯುತ್ತಾರೆ. ಇದನ್ನು ಹೆಚ್ಚು ಸೇವನೆ ಮಾಡಿದರೆ ಕ್ಯಾನ್ಸರ್ ಬರಲಿದೆ. ಇತ್ತಿಚೆಗೆ ಗುಜರಾತ್ ನ ರಾಜ್ ಕೋಟ್ ಎಪಿಎಂಸಿ ಮಾರುಕಟ್ಟೆಯಲ್ಲಿ ಚೀನಾದ ಬೆಳ್ಳುಳ್ಳಿ ಕಂಡು ಬಂದಿದೆ. ಇದರಿಂದ ವ್ಯಾಪಾರಿಗಳು ಪ್ರತಿಭಟನೆಯನ್ನು ಮಾಡಿದ್ದಾರೆ. ಇನ್ಮುಂದೆ ಬೆಳ್ಳುಳ್ಳಿ ತೆಗೆದುಕೊಳ್ಳುವಾಗ ನೋಡಿ ತೆಗೆದುಕೊಳ್ಳಿ.