ಸೇಫ್ ಸಿಟಿಯಾಗಿದ್ದ ಬೆಂಗಳೂರು, ಈಗ ಕ್ರೈಂ ಸಿಟಿಯಾಗಿದೆ : ಸದನದಲ್ಲಿ ಗುಡುಗಿದ ಆರ್ ಅಶೋಕ್
ಬೆಂಗಳೂರು: ಸದನದಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸದನದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸೇಫ್ ಸಿಟಿಯಾಗಿದ್ದ ಬೆಂಗಳೂರು ಈಗ ಕ್ರೈಂ ಸಿಟಿಯಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಆಡಳಿತ ಬಂದಾಗಿನಿಂದ ಕ್ರೈಂ ಸಿಟಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಉದಾಹರಣೆ, ಮಾಜಿ ಸಚಿವ ಗೋಪಾಲಯ್ಯ ಅವರಿಗೆ ಬಂದಿರುವ ಕೊಲೆ ಬೆದರಿಕೆ. ಎಲ್ಲಿ ಕಾನೂನು ವ್ಯವಸ್ಥೆ ಸರಿ ಇರುತ್ತದೆಯೋ ಅಲ್ಲಿ ಬಂಡವಾಳ ಹರಿದು ಬರುತ್ತದೆ. ನಮ್ಮ ರಾಜ್ಯಕ್ಕೆ ಅನೇಕ ಹೂಡಿಕೆ ಹರಿದು ಬರುತ್ತಿತ್ತು. ಆದರೆ ಈಗ ಹೂಡಿಕೆ ಕಡಿಮೆಯಾಗಿದೆ. ಹೂಡಿಕೆದಾರರ ಸಂಖ್ಯೆ ಕಡಿಮೆಯಾಗಿದೆ. ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕ ಈಗ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು ಕ್ರೈಂ ನಲ್ಲಿ ನಂಬರ್ ಒನ್ ಆಗಿದೆ.
ನಮ್ಮ ಸರ್ಕಾರವಿದ್ದಾಗ ಬಾಯಿ ಮುಚ್ಚಿಕೊಂಡಿದ್ದ ಭಯೋತ್ಪಾದಕರು ಬೀದಿ ಬೀದಿಯಲ್ಲಿ ಓಡಾಡುತ್ತಿದ್ದಾರೆ. ಹಿಂದೆಲ್ಲಾ ಜನ್ಮದಿನಕ್ಕೆ ಫ್ಲೆಕ್ಸ್, ಬ್ಯಾನರ್ ಹಾಕುತ್ತಿದ್ದರು. ಆದರೆ ಈಗ ಕೋಲಾರದಲ್ಲಿ ರಾಜಾರೋಷವಾಗಿ ತಲ್ವಾರ್ ಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಅಪರಾಧ ಪ್ರಕರಣಗಳು ಹೆಚ್ಚಾಗಿವೆ.
ಕೆಲವು ಸಂಘಟನೆಯವರು ಕೇಸ್ ವಾಪಾಸ್ ತೆಗೆದುಕೊಳ್ಳುತ್ತಾರೆಂದು ಸಂತೋಷವಾಗಿ ಓಡಾಡುತ್ತಿದ್ದಾರೆ. ಈಗ ಸುಧಾರಿತ ಬಾಂಬ್ ತಯಾರಿ ಮಾಡುತ್ತಿದ್ದಾರೆ. ಕರ್ನಾಟಕದ ಸ್ಲೀಪರ್ ಸೆಲ್ ಆಗಿ ಕೆಲವರು ಕೆಲಸ ಮಾಡುತ್ತಿದ್ದಾರೆ. ಆ ಸ್ಲೀಪರ್ ಸೆಲ್ ಗಳಿಗೆ ಹಣ ಎಲ್ಲಿಂದ ಬರುತ್ತದೆ. ಯಾರೂ ಕೊಡುತ್ತಾರೆ ಎಂಬುದು ಅವರಿಗೇನೆ ಗೊತ್ತಿರಲ್ಲ. ರಾಜ್ಯದಲ್ಲಿ ಗುಪ್ತಚರ ಇಲಾಖೆ ಕೆಲಸ ಮಾಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಅದು ಐಸಿಯನಲ್ಲಿದೆಯೋ, ಚಿಕಿತ್ಸೆ ಕೊಡಲಾಗುತ್ತಿದೆಯೋ ಅದು ಗೊತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.