ಇಂದು ಆಯುಧ ಪೂಜೆ : ಮಹತ್ವ, ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ
ನಾಡಿನೆಲ್ಲೆಡೆ ಸಂಭ್ರಮದ ಆಯುಧ ಪೂಜೆಯನ್ನು ಆಚರಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಆಯುಧ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ಆಯುಧಗಳು ಇರುತ್ತವೆ. ಪತ್ರಿಕೋದ್ಯಮದಲ್ಲಿ ಪೆನ್ನು, ಪುಸ್ತಕವೆಂಬ ಆಯುಧ, ಕಾರ್ಮಿಕರ ಜೀವನದಲ್ಲಿ ಮೆಷಿನ್ ಗಳೆಂಬ ಆಯುಧ, ಉದ್ಯಮಿಗಳಿಗೆ ಕಚೇರಿಯೇ ದೇವರು ಹೀಗೆ ಎಲ್ಲಾ ಕ್ಷೇತ್ರದವರಿಗೂ ಇಂದು ಮಹತ್ವದ ದಿನವಾಗಿದೆ. ತಮಗೆ ಯಶಸ್ಸು ನೀಡುವ ಆಯುಧಗಳಿಗೆ ಪೂಜೆ ಸಲ್ಲಿಸಿ, ನಮಸ್ಕರಿಸುತ್ತಾರೆ. ಅದರಲ್ಲೂ ಇಂದು ವಾಹನಗಳಿಗೆ ದೊಡ್ಡ ಮಹತ್ವವನ್ನು ನೀಡಲಾಗುತ್ತದೆ. ತಮ್ಮ ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ, ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ.
ಪುರಾಣಗಳ ಪ್ರಕಾರ ಇಂದು ಆಯುಧಗಳನ್ನು ಪೂಜಿಸುವುದಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಹಿಂದಿನ ಕಾಲದಲ್ಲಿ ಕ್ಷತ್ರೀಯ ಜನರು ಯುದ್ಧಕ್ಕೆಂದು ಹೋಗುತ್ತಿದ್ದರು. ಆ ಯುದ್ಧ ಸಾಮಾಗ್ರಿಗಳನ್ನೆಲ್ಲ ಇಟ್ಟು ವಿಜಯದಶಮಿಗೂ ಒಂದು ದಿನ ಹಿಂದೆ ಪೂಜೆ ಮಾಡುತ್ತಿದ್ದರು. ಆಯುಧಗಳನ್ನು ಪೂಜಿಸುವುದರಿಂದ ಯುದ್ಧದಲ್ಲಿ ವಿಜಯ ಸಿಗುತ್ತದೆ ಎಂಬ ನಂಬಿಕೆ ಅವರಲ್ಲಿ ಇತ್ತು. ಆ ನಂಬಿಕೆಯ ಸಂಪ್ರದಾಯ ಈಗಲೂ ಮುಂದುವರೆದಿದೆ.
ಆಯುಧ ಪೂಜೆಗೆ ಸಂಬಂಧಿಸಿದ ದಂತಕಥೆಯ ಪ್ರಕಾರ, ದುರ್ಗಾದೇವಿಯು ತನ್ನ ರೌದ್ರ ರೂಪದಲ್ಲಿ ರಾಕ್ಷಸ ಮಹಿಷಾಸುರನನ್ನು ಸೋಲಿಸಿರುವ ದಿನವಾಗಿದೆ. ಎಲ್ಲಾ ದೇವತೆಗಳು ರಾಕ್ಷಸನನ್ನು ಸೋಲಿಸಲು ದುರ್ಗೆಗೆ ತಮ್ಮ ಆಯುಧಗಳು, ಪ್ರತಿಭೆ ಮತ್ತು ಶಕ್ತಿಗಳನ್ನು ನೀಡಿದರು. ಸಂಪೂರ್ಣ ಯುದ್ಧವು ಒಂಬತ್ತು ದಿನಗಳ ಕಾಲ ನಡೆಯಿತು. ಮತ್ತು ನವಮಿಯ ಮುನ್ನಾದಿನದಂದು, ದುರ್ಗಾ ದೇವಿಯು ಮಹಿಷಾಸುರನನ್ನು ಕೊಲ್ಲುವ ಮೂಲಕ ಯುದ್ಧವನ್ನು ಮುಕ್ತಾಯಗೊಳಿಸಿದಳು. ಹೀಗಾಗಿ, ಆ ದಿನವನ್ನು ಮಹಾನವಮಿ ಎಂದು ಆಚರಿಸಲಾಗುತ್ತದೆ ಮತ್ತು ಆಯುಧ ಪೂಜೆಯ ವಿಧಿವಿಧಾನವನ್ನು ಪೂರೈಸಲಾಗುತ್ತದೆ. ದುರ್ಗಾ ದೇವಿಯು ಬಳಸಿದ ಎಲ್ಲಾ ಆಯುಧಗಳು ಮತ್ತು ಉಪಕರಣಗಳು ತಮ್ಮ ಉದ್ದೇಶವನ್ನು ಸಾಧಿಸಿವೆ ಎನ್ನುವ ನಂಬಿಕೆಯಿದೆ.
* ಆಯುಧ ಪೂಜೆಯ ದಿನ ಮನೆಯಲ್ಲಿರುವ ಆಯುಧಗಳನ್ನು ಸ್ವಚ್ಛಗೊಳಿಸಿ ಪೂಜಿಸುತ್ತಾರೆ.
* ಕಚೇರಿಗಳಲ್ಲಿ ಕಂಪ್ಯೂಟರ್, ವಾಹನಗಳಿಗೆಲ್ಲಾ ಪೂಜೆ ಸಲ್ಲಿಸುತ್ತಾರೆ.
* ರೈತರು ಕೂಡ ಭೂಮಿ ಊಳುವ ನೇಗಿಲು, ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸುತ್ತಾರೆ.
* ಸೈನಿಕರು ದೇಶ ಕಾಪಾಡಲು ಬಳಸುವ ವಸ್ತುಗಳಿಗೆ ನಮಿಸುತ್ತಾರೆ.