Ayodhya Ram Mandir : ನಾಳೆ ಬಾಲರಾಮನಿಗೆ ಪ್ರಾಣಪ್ರತಿಷ್ಠೆ : ಅಯೋಧ್ಯೆಯಲ್ಲಿ ಬಿಗಿ ಬಂದೋಬಸ್ತ್
ಸುದ್ದಿಒನ್ : ಅಯೋಧ್ಯೆ ಆ ಹೆಸರು ಕೇಳುತ್ತಲೇ ಒಂದು ಆಧ್ಯಾತ್ಮಿಕ ಆನಂದ. ದಿವ್ಯವಾದ ಭವ್ಯ ರಾಮ ಮಂದಿರಕ್ಕೆ ಕೋಟ್ಯಂತರ ಭಕ್ತಾದಿಗಳ ಮನದಾಳದ ಆಮಂತ್ರಣ ನೀಡುತ್ತಿರುವ ಶ್ರೀರಾಮಚಂದ್ರ. ನಾಳೆ ಬಾಲರಾಮನಾಗಿ ಮೊದಲ ದರ್ಶನ ನೀಡುವ ಮೂಲಕ ಕೋಟ್ಯಂತರ ಭಕ್ತಾದಿಗಳ ಕನಸು ಈಡೇರಿಸಲಿದ್ದಾನೆ. ಆ ಪರಮಾತ್ಮನ ದರ್ಶನಕ್ಕಾಗಿ ಪ್ರಪಂಚದಾದ್ಯಂತ ಇರುವ ಹಿಂದೂಗಳು ಹಾತೊರೆಯುತ್ತಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ಸಂಪೂರ್ಣ ಸಿದ್ಧಗೊಂಡಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಶ್ರೀರಾಮ ಭಕ್ತರಿಗೆ ದರ್ಶನ ನೀಡಲಿದ್ದಾನೆ. 1300 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರನೇ ಅತಿ ದೊಡ್ಡ ಹಿಂದೂ ದೇವಾಲಯವಾಗಿ ನಿರ್ಮಾಣವಾಗಿದೆ. ಇಂದು 125 ಕಲಶಗಳಿಂದ ಶ್ರೀರಾಮನ ವಿಗ್ರಹಕ್ಕೆ ಅಭಿಷೇಕ ಮಾಡಲಾಗುವುದು. ನಾಳೆ ಮಧ್ಯಾನ್ಹ 12: 29 ಕ್ಕೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಬಾಲರಾಮನಿಗೆ ಪ್ರಾಣಪ್ರತಿಷ್ಠೆ ನೆರವೇರಲಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ಹದ್ದಿನ ಕಣ್ಣಿಟ್ಟು ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ವಿವಿಐಪಿಗಳ ಭದ್ರತೆಗಾಗಿ 45 ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಮತ್ತೊಂದೆಡೆ, ಎನ್ಐಎ ಮತ್ತು ಯುಪಿ ಎಟಿಎಸ್ ಸೇರಿದಂತೆ ಸೈಬರ್ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ. ಜಪಾನ್ ಮತ್ತು ಅಮೆರಿಕದ ತಂತ್ರಜ್ಞಾನಕ್ಕೆ ಪೈಪೋಟಿ ನೀಡಲು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ.
ಭದ್ರತೆಗಾಗಿ ಗರುಡ ಡ್ರೋನ್ ನಿಯೋಜಿಸಲಾಗಿದೆ.
ಭದ್ರತೆಯೊಂದಿಗೆ ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಈ ಡ್ರೋನ್ ಅನ್ನು ಬಳಸಲಾಗುತ್ತದೆ.
ಅಯೋಧ್ಯೆ ರಾಮಮಂದಿರ ಮತ್ತು ಅಯೋಧ್ಯಾ ನಗರವನ್ನು ಹೂವಿನಿಂದ ಅಲಂಕರಿಸಲು ಸುಮಾರು ಎಂಟುನೂರು ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಸುಮಾರು 1100 ಟನ್ ಹೂವುಗಳನ್ನು ಅಲಂಕಾರಕ್ಕಾಗಿ ಬಳಸಲಾಗಿದೆ. ಜೈ ಶ್ರೀ ರಾಮ್ ಅಕ್ಷರಗಳು ಕಾಣಿಸಿಕೊಳ್ಳುವಂತೆ ಹೂವುಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಪ್ರಾಣ ಪ್ರತಿಷ್ಠೆಯ ನಿಮಿತ್ತ ಅಯೋಧ್ಯೆಯ ಯಾಗಶಾಲೆಯ ಬಳಿ ಭಕ್ತರು ನಿರಂತರವಾಗಿ ರಾಮನಾಮ ಜಪ ಮಾಡುತ್ತಿದ್ದಾರೆ. ಈ ಮಹಾನ್ ರಾಮನಾಮದ ಪಠಣವು 9 ದಿನಗಳವರೆಗೆ ಮುಂದುವರಿಯುತ್ತದೆ.