ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬಲು ಕೇಂದ್ರ ಸಚಿವರ ಆಗಮನ : ಡಿ.6ಕ್ಕೆ ಶಿವಮೊಗ್ಗದಲ್ಲಿ ಸಮಾವೇಶ
ಶಿವಮೊಗ್ಗ: ಕಳೆದ ಕೆಲವು ದಿನಗಳ ಹಿಂದೆ ಏರಿದ್ದ ಅಡಿಕೆ ಬೆಲೆ ದಿಢೀರನೆ ಕುಸಿತವಾಗಿದೆ. ಅಷ್ಟೇ ಅಲ್ಲ ಎಲ್ಲೆಲ್ಲಿಂದಲೋ ಅಡಿಕೆ ಮಾರುಕಟ್ಟೆಗೆ ಬರುತ್ತಿದ್ದು, ರಾಜ್ಯದ ಅಡಿಕೆಗೆ ಬೆಲೆಯೂ ಕಡಿಮೆಯಾಗುತ್ತಿದೆ, ಡಿಮ್ಯಾಂಡು ಕುಸಿಯುತ್ತಿದೆ. ಇದರಿಂದ ರಾಜ್ಯದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡಿಕೆ ಬೆಳೆಗಾರರ ಕಷ್ಟ ಕೇಳುವುದಕ್ಕೆ ಕೇಂದ್ರ ಕೃಷಿ ಸಚಿವರು ರಾಜ್ಯಕ್ಕೆ ಬರ್ತಿದ್ದಾರೆ.
ಡಿಸೆಂಬರ್ 6ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಅಡಿಕೆ ಬೆಳೆಗಾರರ ಸಮಾವೇಶ ನಡೆಯಲಿದೆ. ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿದ್ದು, ಈಗಾಗಲೇ ಕೋಟ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಮುಂತಾದವರ ನಿಯೋಗ ಕೇಂದ್ರ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರನ್ನು ಭೇಟಿಯಾಗಿ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವೇಳೆ ಅಡಿಕೆ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಕ್ರಮ ಕೈಗೊಳ್ಳಬೇಕಯ ಎಂದು ನಿಯೋಗ ಮನವಿ ಮಾಡಿದೆ. ಇದೆ ವೇಳೆ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಜೊತೆಗೆ ಇರಲಿದೆ ಎಂದು ಭರವಸೆಯನ್ನು ನೀಡಿದ್ದಾರೆ.
ಇನ್ನು ಅಡಿಕೆ ಬೆಳೆಗಾರರ ನೆರವಿಗೆ ಕೇಂದ್ರ ಸಚಿವರು ಒಪ್ಪಿದ್ದು ಸಮಾವೇಶಕ್ಕೆ ಬರುತ್ತೇವೆಂದು ತಿಳಿಸಿದ್ದಾರೆ. ಈ ಸಮಾವೇಶಕ್ಕೆ 50 ಸಾವಿರ ರೈತರನ್ನು ಕರೆಸುವ ಉದ್ದೇಶ ಹೊಂದಲಾಗಿದೆ. ಈ ಸಮಾವೇಶದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಚರ್ಚೆ ನಡೆಸಲಿದ್ದಾರೆ. ಈ ಮೂಲಕ ಅಡಿಕೆ ಬೆಳೆಗಾರರಿಗೆ ಒಂದಷ್ಟು ಪರಿಹಾರ ಕೊಡಿಸುವ ಪ್ರಯತ್ನ ನಡೆಯಲಿದೆ.