ಯತ್ನಾಳ್ ಪತ್ರಕ್ಕೆ ಅಮಿತ್ ಶಾ ಸ್ಪಂದನೆ : ಸಿಬಿಐ ಮಧ್ಯಪ್ರವೇಶಿಸಿದರೆ ಯಾರಿಗೆಲ್ಲಾ ಟೆನ್ಶನ್..?
ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಫೈಯರ್ ಬ್ರಾಂಡ್ ಅಂತಾನೇ ಹೆಸರು ಮಾಡಿದ್ದಾರೆ. ಒಮ್ಮೊಮ್ಮೆ ತಮ್ಮ ಪಕ್ಷದವರ ಮೇಲೆ ಹೌಹಾರುತ್ತಾರೆ. ಅದರಲ್ಲೂ ಬಿಎಸ್ವೈ ಮೇಲೆ ಆಗಾಗ ಕೆಂಡಕಾರುತ್ತಾ ಇರುತ್ತಾರೆ. ಇದೀಗ ಕೆಲವೊಂದು ಹಗರಣದ ಮೇಲೆ ಬೆಳಕು ಚೆಲ್ಲುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರಕ್ಕೆ ಅಮಿತ್ ಶಾ ಕಡೆಯಿಂದ ಪ್ರತಿಕ್ರಿಯೆ ಕೂಡ ಬಂದಿದೆಯಂತೆ.
ಯತ್ನಾಳ್ ಬರೆದ ಪತ್ರದಲ್ಲಿ: ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಚಾರ ನಡೆಸಲು ಸಹಕಾರ ಕೊಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಇದರಿಂದ ಅನೇಕ ದಕ್ಷ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ಬೆಂಗಳೂರು ವಿವಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2016ರಲ್ಲಿ ಕೆ.ಜೆ.ಜಾರ್ಜ್ ಹೆಸರು ಹೇಳಿ ಡಿವೈಎಸ್ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೇ ಮೇ ತಿಂಗಳಲ್ಲಿ ಕೆ ಆರ್ ಐಡಿ ಎಲ್ ಗುತ್ತಿಗೆದಾರ ಪಿ.ಎಸ್.ಗೌಡರ್ ಅಧಿಕಾರಿಗಳನ್ನು ದೂರಿ ದಾವಣಗೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತಿಚೆಗಷ್ಟೇ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಮೇಲಧಿಕಾರಿಗಳ ಒತ್ತಡಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಬಿಐ ಮಧ್ಯ ಪ್ರವೇಶಿಸಿ ಈ ಪ್ರಕರಣ ತನಿಖೆ ನಡೆಸಬೇಕೆಂದು ಪತ್ರದ ಮೂಲಕ ಕೇಳಿಕೊಂಡಿದ್ದಾರೆ.
ಪತ್ರಕ್ಕೆ ಅಮಿತ್ ಶಾ ಅವರು ಪ್ರತಿಕ್ರಿಯೆ ನೀಡಿದ್ದು, ವಾಲ್ಮೀಕಿ ಅಭಿವೃದ್ಧಿ ನಿಗಮದ ಬಗ್ಗೆ ನೀವೂ ಬರೆದ ಪತ್ರವನ್ನು ಸ್ವೀಕಾರ ಮಾಡಿದ್ದೇವೆ ಎಂದು ಪತ್ರ ಬರೆದಿದ್ದಾರಂತೆ. ಈ ಮೂಲಕ ಅಮಿತ್ ಶಾ ಅವರಿಗೆ ರಾಜ್ಯದ ವಿಚಾರಗಳನ್ನು ತಲುಪಿಸಿದ್ದಾರೆ. ಅಮಿತ್ ಶಾ ಅವರು ಸಿಬಿಐಗೆ ಈ ಪ್ರಕರಣಗಳನ್ನು ವಹಿಸುತ್ತಾರಾ ಎಂಬುದನ್ನು ನೋಡಬೇಕಿದೆ.