ಸಿಎಂ, ಡಿಸಿಎಂ ವಿರುದ್ಧ ಶತ್ರು ಭೈರವಿಯಾಗದ ಆರೋಪ : ಕೇರಳ ಸರ್ಕಾರ ಹೇಳಿದ್ದೇನು..?
ಇತ್ತಿಚೆಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಒಂದು ಶಾಕಿಂಗ್ ನ್ಯೂಸ್ ಒಂದನ್ನು ಹೇಳಿದ್ದರು. ಕೇರಳದಲ್ಲಿ ನನ್ನ, ಸಿಎಂ ಹಾಗೂ ಸರ್ಕಾರದ ವಿರುದ್ಧ ಶತ್ತು ಭೈರವಿ ಯಾಗ ಮಾಡುತ್ತಿದ್ದಾರೆ. ಅದನ್ನು ಯಾರು ಮಾಡುತ್ತಿದ್ದಾರೆ, ಅದರಲ್ಲಿ ಯಾರೆಲ್ಲಾ ಭಾಗಿಯಾಗುತ್ತಿದ್ದಾರೆ ಎಂಬ ಮಾಹಿತಿ ನನಗಿದೆ. ನಮ್ಮ ಮನೆ ದೇವರು ನಮ್ಮನ್ನು ಕಾಪಾಡುತ್ತಾರೆ ಎಂದಿದ್ದರು. ಈ ಆರೋಪಕ್ಕೆ ಇದೀಗ ಕೇರಳ ಸರ್ಕಾರ ಸ್ಪಷ್ಟನೆ ನೀಡಿದೆ.
ಈ ಹೇಳಿಕೆ ಕೇರಳದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಂತೆ ಕೇರಳದ ಸರ್ಕಾರ ಅಲರ್ಟ್ ಆಗಿದೆ. ಬಳಿಕ ತನಿಖೆಯನ್ನು ನಡೆಸಿದೆ. ಕೇರಳ ರಾಜ್ಯ ಗುಪ್ತಚರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಈ ಕುರಿತು ವಿಶೇಷ ತನಿಖಾ ತಂಡ ರಚಿಸಿದ್ದು, ಅದರ ಮೂಲಕ ತನಿಖೆ ನಡೆಸಲಾಗಿದೆ. ಕೇರಳ ರಾಜ್ಯದ ಕಣ್ಣೂರು, ತಳಿಪರಂಬ ಬಳಿ ಓಡಾಡಿ ಮಾಹಿತಿ ಕಲೆ ಹಾಕಿದ್ದಾರೆ. ಶತ್ರು ಭೈರವಿಯಾಗ ನಡೆಸಿ, ಬಲಿ ಏನಾದರೂ ಕೊಟ್ಟಿದ್ದಾರಾ ಎಂಬ ತನಿಖೆಯನ್ನು ನಡೆಸಿದ್ದಾರೆ. ಈ ತನಿಖೆಯ ವರದಿಯನ್ನು ವಿಶೇಷ ತಂಡ, ಕೇರಳದ ಡಿಜಿಪಿಗೆ ತಲುಪಿಸಿದೆ. ಅಂಥ ಯಾವುದೇ ಪ್ರಾಣಿಬಲಿ ನಡೆದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ಇನ್ನು ಕೇರಳದ ಸಚಿವರಿಂದಲೂ ಈ ಸಂಬಂಧ ಸ್ಪಷ್ಟನೆ ನೀಡಲಾಗಿದೆ. ಕೇರಳದ ದೇವಸ್ವಂ ಬೋರ್ಡ್ ಸಚಿವ ರಾಧಾಕೃಷ್ಣನ್ ಅವರು ಆರೋಪವನ್ನು ನಿರಾಕರಿಸಿದ್ದಾರೆ. ನಮ್ಮ ರಾಜ್ಯದ ಯಾವುದೇ ದೇವಸ್ಥಾನಗಳಲ್ಲೂ ಪ್ರಾಣಿ ಬಲಿ ನಡೆದಿಲ್ಲ ಎಂದು ಸ್ಒಷ್ಟನೆ ನೀಡಿದ್ದಾರೆ. ಪ್ರಾಣಿ ಬಲಿ ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳು ನಡೆದಿಲ್ಲ. ರಾಜರಾಜೇಶ್ವರಿ ದೇವಸ್ಥಾನದ ಹೆಸರಿನ ಬಗ್ಗೆ ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳು ಎಂದಿದ್ದಾರೆ.