2ನೇ ಬಾರಿ ಸಿಎಂ ಆಗಿದ್ದಕ್ಕೆ ಇವರಿಗೆಲ್ಲ ಹೊಟ್ಟೆ ಉರಿ : ವಿಪಕ್ಷಗಳಿಗೆ ಸಿದ್ದರಾಮಯ್ಯ ತಿರುಗೇಟು
ಮೈಸೂರು: ರಾಜ್ಯದಲ್ಲಿ ಸದ್ಯ ವಾಲ್ಮೀಕಿ ನಿಗಮ ಅಭಿವೃದ್ಧಿಯ ಬಹುಕೋಟಿ ಹಗರಣ ಹಾಗೂ ಮೂಡಾ ಹಗರಣದ ವಿಚಾರ ಸದ್ದು ಮಾಡುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕರೆಲ್ಲಾ ಸಿಎಂ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ವಿಪಕ್ಷಗಳ ಆರೋಪಕ್ಕೆ ಸಿಎಂ ಕೂಡ ತಿರುಗೇಟು ನೀಡಿದ್ದು, ನಾನು ಎರಡನೇ ಬಾರಿಗೆ ಸಿಎಂ ಆಗಿದ್ದನ್ನು ಇವರಿಂದ ಸಹಿಸುವುದಕ್ಕೆ ಆಗುತ್ತಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಿಂದುಳಿದ ಸಮುದಾಯದ ನಾನು ಎರಡನೇ ಬಾರಿಗೆ ಸಿಎಂ ಆಗಿದ್ದನ್ನು ಇವರಿಂದ ಸಹಿಲಾಗುತ್ತಿಲ್ಲ. ನನ್ನ ಮೇಲೆ ಇವರಿಗೆಲ್ಲಾ ಹೊಟ್ಟೆ ಉರಿ. ಅದಕ್ಕೆ ಹೀಗೆಲ್ಲಾ ಆರೋಪ ಮಾಡುತ್ತಿದ್ದಾರೆ. ನನ್ನ ವಿರುದ್ಧ ಆರೋಪ ಮಾಡುವುದಕ್ಕೆ ಅವರುಗೆ ಬೇರೆ ಏನು ಇಲ್ಲ. ಮೂಡಾ ವಿಚಾರವನ್ನು ಎಳೆದು ತರುತ್ತಿದ್ದಾರೆ. ರಾಜಕೀಯವಾಗಿ ಉತ್ತರ ಕೊಡಲು ನಮಗು ಗೊತ್ತಿದೆ. ಮೂಡಾ ಹಗರಣದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಅವರು ರಾಜಕೀಯ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ರಾಜಕೀಯ ಮಾಡುವುದಾದರೆ ನಾವೂ ರಾಜಕೀಯವಾಗಿ ಎದುರಿಸುತ್ತೇವೆ. ನೋಡ್ತಾ ಇರಿ ರಾಜಕೀಯವಾಗಿ ಅದಕ್ಕೆ ಉತ್ತರ ಕೊಡುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಈಗಾಗಲೇ ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅದೆಲ್ಲದರ ತನಿಖೆಯಾಗಬೇಕಿದೆ. ಇನ್ನು ಮೂಡಾ ಸೈಟುಗಳ ಹಂಚಿಕೆಯ ವಿಚಾರಕ್ಕೆ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.