ಎಷ್ಟೋ ಮೃತದೇಹಗಳನ್ನು ಹುಡುಕಿದ ಈಶ್ವರ್ ಗೆ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರದ್ದೆ ಸವಾಲು..!
ಉತ್ತರ ಕನ್ನಡ: ಶಿರೂರು ಗುಡ್ಡ ಕುಸಿತದಿಂದಾಗಿ ಕಾಣೆಯಾದವರಲ್ಲಿ ಈಗಾಗಲೇ ಹಲವು ಮೃತದೇಹಗಳು ಪತ್ತೆಯಾಗಿವೆ. ಆದರೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಸ್ಥಳೀಯರಾದ ಲೋಕೇಶ್ ಹಾಗೂ ಜಗನ್ನಾಥ ನಾಯ್ಕ ಅವರ ಮೃತದೇಹಗಳಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಇಂದಿಗೆ 13ನೇ ದಿನವಾಗಿದೆ. ನಿನ್ನೆಯಿಂದ ಕರಾವಳಿಯ ಈಜು ತಜ್ಞ ಈಶ್ವರ್ ಅವರನ್ನು ಕರೆತರಲಾಗಿದೆ.
ಈಶ್ವರ್ ಹಾಗೂ ತಂಡ ನದಿಗೆ ಇಳಿದು ಕಾರ್ಯಾಚರಣೆ ಶುರು ಮಾಡಿದೆ. ಆದರೆ ಅವರಿಗೂ ಮೃತದೇಹಗಳು ಸಿಗುತ್ತಿಲ್ಲ. ಗಂಗಾವಳಿ ನದಿ ನೀರಿನ ರಭಸಕ್ಕೆ ಈಶ್ವರ್ ಅಂಡ್ ತಂಡವೇ ಆಶ್ಚರ್ಯಗೊಂಡಿದೆ. ಈ ನೀರಿನಲ್ಲಿ ನಾಪತ್ತೆಯಾದವರನ್ನು ಹುಡುಕುವುದೇ ಬಹಳ ಕಷ್ಟವಾಗಿದೆ. ಅದರಲ್ಲೂ ಗಂಗಾವಳಿ ನದಿ ನೀರಿನಲ್ಲಿ ಹುಡುಕುವುದೇ ಸವಾಲಿನ ಕೆಲಸವಾಗಿದೆ. ಮೂರು ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ನೀರಿನಲ್ಲಿ ಮುಳುಗಿದಾಗ ಕಣ್ಣಿಗೆ ಏನು ಕಾಣಿಸುತ್ತಿಲ್ಲ. ನೀರಿನ ಜೊತೆಗೆ ಮಣ್ಣು ಸೇರಿಕೊಂಡಿದೆ. ಹೀಗಾಗಿ ಏನು ಕಾಣಿಸುತ್ತಿಲ್ಲ ಎಂದು ಮುಳುಗು ತಜ್ಞ ಈಶ್ವರ್ ಹೇಳಿದ್ದಾರೆ.
ಇಂದು ಕೂಡ ಕಾರ್ಯಾಚರಣೆಯನ್ನು ಮುಂದುವರೆಸಿರುವ ಬಗ್ಗೆ ಮಾತನಾಡಿ, ನಿನ್ನೆ ಮೂರು ಜಾಗದಲ್ಲಿ ಹುಡುಕಾಡಿದ್ದೇವೆ. ಆದರೆ ಏನು ಕಂಡಿಲ್ಲ. ಇಂದು ಮುಖ್ಯ ಪಾಯಿಂಟ್ ನಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಹುಡುಕಾಟ ನಡೆಸಿದ್ದಾರೆ. ನಾವೂ ಕೂಡ ನಮ್ಮ ಜೀವದ ಹಂಗು ತೊರೆದು ಹುಡುಕಾಟ ನಡೆಸುತ್ತಿದ್ದೇವೆ. ನಾಪತ್ತೆಯಾದವರ ಕುಟುಂಬಸ್ಥರ ಕಣ್ಣೀರು ನೋಡುವುದಕ್ಕೆ ಆಗುತ್ತಿಲ್ಲ. ಒಟ್ಟು ಜನರಿರುವ ತಂಡ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಮ್ಮ ಪ್ರಯತ್ನ ನಾವೂ ಮಾಡಿತ್ತೇವೆ. ನಾನು ನೋಡಿದ ಹಾಗೇ ಇದು ಸವಾಲಿನ ಕೆಲಸವಾಗಿದೆ ಎಂದು ಈಶ್ವರ್ ಹೇಳಿದ್ದಾರೆ.