ದರ್ಶನ್ ಮನವಿಯಂತೆ ಮಾಧ್ಯಮಗಳಿಗೆ ಹೈಕೋರ್ಟ್ ನಿರ್ಬಂಧ..!
ಬೆಂಗಳೂರು: ರೇಣುಕಾಸ್ವಾಮಿ ಕೊಲೆಯಾದ ಮೂರು ತಿಂಗಳ ಒಳಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ ಹಾಗೂ ಗ್ಯಾಂಗ್ ಕರಾಳ ಮುಖ ಹಾಗೂ ದರ್ಶನ್ ಹಾಗೂ ಪವಿತ್ರಾ ಗೌಡ ಸ್ವ ಇಚ್ಛಾ ಹೇಳಿಕೆ ಎಲ್ಲವನ್ನು ದಾಖಲಿಸಲಾಗಿದೆ. ಚಾರ್ಜ್ ಶೀಟ್ ನ ಇಂಚಿಂಚು ಮಾಹಿತಿ ಮಾಧ್ಯಮದವರಿಗೆ ಲಭ್ಯವಾಗಿತ್ತು. ಪ್ರಸಾರ ಕೂಡ ಮಾಡಲಾಗಿತ್ತು. ಇದೀಗ ಹೈಕೋರ್ಟ್ ಮಾಧ್ಯಮಗಳಿಗೆ ನಿರ್ಬಂಧ ಹೇರಿದೆ. ವಿದ್ಯುನ್ಮಾನ, ಮುದ್ರಣ ಹಾಗೂ ಸಾಮಾಜಿಕ ಜಾಲತಾಣಗಳಿಗೂ ನಿರ್ಬಂಧ ಹೇರಿದೆ.
ದರ್ಶನ ಪರ ವಕೀಲರು ಸೋಮವಾರ ಈ ಸಂಬಂಧ ಹೈಕೋರ್ಟ್ ಗೆ ಅರ್ಜಿ ಹಾಕಿದ್ದರು. ಚಾರ್ಜ್ ಶೀಟ್ ನಲ್ಲಿರುವ ಮಾಹಿತಿ ಸೋರಿಕೆಯಾಗಿದ್ದು, ಅವುಗಳ ಪ್ರಸಾರಕ್ಕೆ ತಡೆ ನೀಡಬೇಕೆಂದು ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಪ್ರಕರಣದ ವುಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಇಂದು ಆದೇಶವನ್ನು ಪ್ರಕಟ ಮಾಡಿದೆ. ದರ್ಶನ್ ಅವರ ಮನವಿಯಂತೆ ಮಾಧ್ಯಮಗಳಲ್ಲಿ ಚಾರ್ಜ್ ಶೀಟ್ ನಲ್ಲಿರುವ ಗೌಪ್ಯ ಮಾಹಿತಿಯನ್ನು ಪ್ರಸಾರ, ಪ್ರಕಟ ಅಥವಾ ಹಂಚಿಕೆ ಮಾಡಬಾರದೆಂದು ಸೂಚಿಸಿದೆ.
ಇನ್ನು ಒಂದು ವೇಳೆ ನ್ಯಾಯಾಲಯದ ಉಲ್ಲಂಘನೆ ಮಾಡಿದರೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಮಾಹಿತಿಮತ್ತು ಪ್ರಸಾರ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಜೊತೆಗೆ ಈ ಆದೇಶವನ್ನು ಎಲ್ಕಾ ಮಾಧ್ಯಮಗಳಿಗೆ ರವಾನಿಸಲು ಸರ್ಕಾರಕ್ಕೆ ನ್ಯಾಯಾಲಯವು ಸೂಚನೆ ನೀಡಿದೆ. ಈ ಮೂಲಕ ಚಾರ್ಜ್ ಶೀಟ್ ನಲ್ಲಿರುವ ಗೌಪ್ಯ ಮಾಹಿತಿಯನ್ನು ಇನ್ಮುಂದೆ ಯಾವುದೇ ಮಾಧ್ಯಮದಲ್ಲೂ ಪ್ರಸಾರ ಮಾಡುವಂತೆ ಇಲ್ಲ. ಪ್ರಸಾರ ಮಾಡಿದರೆ ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದೆ.