ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಅಂಗೀಕಾರ : ದಂಡ ವಿಧಿಸುವಂತೆ ಸೂಚನೆ
ಬೆಂಗಳೂರು: ವಾಣಿಜ್ಯ ಮಳಿಗೆಗಳು ಸೇರಿದಂತೆ ಅಂಗಡಿ, ಮುಂಗಟ್ಟುಗಳ ಮುಂದಿನ ಬೋರ್ಡ್ ಗಳಲ್ಲಿ ಕನ್ನಡ ಕಡ್ಡಾಯಕ್ಕೆ ಕನ್ನಡಪರ ಸಂಘಟನೆಗಳು ಹೋರಾಡುತ್ತಿವೆ. ಕಳೆದ ಕೆಲದಿನಗಳ ಹಿಂದೆ ಕನ್ನಡಪರ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನೇ ಮಾಡಿದ್ದವು. ಆದರೆ ಇದರಿಂದ ಅರೆಸ್ಟ್ ಕೂಡ ಆಗಿದ್ದಾರೆ. ಈ ಸಂಬಂಧ ಕನ್ನಡ ಕಡ್ಡಾಯದ ವಿಚಾರದ ಪ್ರಸ್ತಾವನೆಯನ್ನು ರಾಜ್ಯಪಾಲರ ಬಳಿಗೆ ಕಳುಹಿಸಿ, ಅಂಗೀಕಾರ ಮಾಡಿಸಿಕೊಳ್ಳಲು ಪ್ರಯತ್ನ ನಡೆಸಿತ್ತು. ಆದರೆ ರಾಜ್ಯಪಾಲರು ಅದನ್ನು ಸದನದಲ್ಲಿ ಮಂಡಿಸಿ, ಅನುಮತಿ ಪಡೆಯಿರಿ ಎಂದೇ ಹೇಳಿದ್ದರು. ಇದೀಗ ಇಂದಿನ ಸದನದಲ್ಲಿ ಅಂಗೀಕಾರ ಮಾಡಲಾಗಿದೆ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕದ ಮೇಲಿನ ಚರ್ಚೆ ವೇಳೆ, ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿದ್ದು, ಅಂಗಡಿ, ಮುಂಗಟ್ಟು ಎಲ್ಲಾ ಕಡೆ ಕನ್ನಡ ಕಡ್ಡಾಯಗೊಳಿಸಬೇಕು. ನಾಮ ಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಇರಬೇಕು. ಈ ಬಗ್ಗೆ ವಿಧೇಯಕವನ್ನು ನಾವೂ ತಂದಿದ್ದೇವೆ. ಈ ತಿದ್ದುಪಡಿಯನ್ನು ಅಂಗೀಕರಿಸಬೇಕೆಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಕನ್ನಡ ಕಡ್ಡಾಯ ಎಂದು ಕೇಳಿ ಕೇಳಿ ಸಾಕಾಗಿದೆ. ಆದರೆ ಕನ್ನಡ ಕಡ್ಡಾಯ ಅನುಷ್ಠಾನವೂ ಆಗಬೇಕು. ಮಾಲ್ ಮಾಲೀಕರು ಕನ್ನಡ ಕಡ್ಡಾಯ ನೋಟೀಸ್ ಗೆ ತಡೆ ತರುತ್ತಾರೆ. ಮೊನ್ನೆ ಹೋರಾಟದ ವೇಳೆ ಏನೆಲ್ಲಾ ಆಗಿದೆ ಎಂಬುದನ್ನು ನೋಡಿದ್ದೇವೆ. ಸರ್ಕಾರ ಮಾಲ್ ಗಳನ್ನು ಮುಚ್ಚಬೇಕೆಂಬ ಹೋರಾಟ ನಡೆಯಿತು. ಆದರೆ ಐದೇ ನಿಮಿಷದಲ್ಲಿ ಆ ವಿಚಾರಕ್ಕೆ ತಡೆ ತಂದರು. ಹೀಗಾಗಿ ಇದರಲ್ಲಿ ದಂಡವನ್ನು ವಿಧಿಸುವ ಅಂಶವನ್ನು ತರಬೇಕೆಂದು ಆರ್ ಅಶೋಕ್ ಒತ್ತಾಯಿಸಿದರು.