ಒಂದು ವರ್ಷದ ಹಿಂದೆ ಯಾರೂ ಈ ಗೆಲುವು ನಿರೀಕ್ಷೆ ಮಾಡಿರಲಿಲ್ಲ : ಸಿದ್ದರಾಮಯ್ಯ
ಬೆಂಗಳೂರು: ಇಂದು ಐದು ರಾಜ್ಯಗಳ ಫಲಿತಾಂಶ ಹೊರ ಬಿದ್ದಿದೆ. ಅದರಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಈ ಗೆಲುವಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಒಂದು ವರ್ಷದ ಹಿಂದೆ ಈ ಗೆಲುವನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಸೋಲು - ಗೆಲುವು ಸಹಜವಾಗಿದೆ. ಅದರಲ್ಲೂ ಸೋಲು ಗೆಲುವಿನಿಂದ ರಾಜಕೀಯ ಪಕ್ಷಗಳು ಪಾಠ ಕಲಿಯುವುದು ಸಾಕಷ್ಟು ಇದೆ. ನಾವೂ ಸೋಲಿನಿಂದ ಕುಗ್ಗುವುದಿಲ್ಲ, ಹಿಗ್ಗುವುದಿಲ್ಲ. ನಾಲ್ಕು ರಾಜ್ಯಗಳ ಚುನಾವಣಾ ಪೈಕಿ ತೆಲಂಗಾಣ ಫಲಿತಾಂಶ ಸ್ಪಷ್ಟ ಬಹುಮತ ಬಂದಿದೆ. ಮಧ್ಯಪ್ರದೇಶ, ಛತ್ತಿಸ್ ಘಡ, ರಾಜಸ್ತಾನದಲ್ಲಿ ಹಿನ್ನಡೆಯಾಗಿದೆ. ತೆಲಂಗಾಣ ನಮ್ಮ ನೆರೆಯ ರಾಜ್ಯವಾಗಿರುವ ಕಾರಣ ಅಲ್ಲಿನ ಗೆಲುವಿನಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಶ್ರಮದ ದೊಡ್ಡ ಪಾತ್ರ ಇದೆ. ವರ್ಷದ ಹಿಂದೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಕಾರ್ಯಕ್ರಮ ಅಲ್ಲಿನ ಪಕ್ಷದ ಕಾರ್ಯಕರ್ತರನ್ನು ಇನ್ನಷ್ಟು ಹುರಿದುಂಬಿಸಿದ್ದು ನಿಜ.
ಕರ್ನಾಟಕದ ಗೆಲುವು ಹಾಗೂ ಇಲ್ಲಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ನುಡಿದಂತೆ ನಡೆದದ್ದು ತೆಲಂಗಾಣ ರಾಜ್ಯದ ಜನರಿಗೆ ನಂಬಿಕೆ ಮೂಡಿಸಿದೆ. ಜೊತೆಗೆ ಬಿಜೆಪಿ ಮತ್ತು ಬಿಆರ್ಎಸ್ ಪಕ್ಷ ಮೈತ್ರಿ ಮಾಡಿಕೊಂಡಿದ್ದು, ಜನರಿಗೆ ಎರಡು ಪಕ್ಷಗಳ ಮೇಲೆ ಭರವಸೆ ಕಳೆದುಕೊಳ್ಳುವಂತೆ ಮಾಡಿದೆ. ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ ಎರಡು ಪಕ್ಷದ ಒಳ ಒಪ್ಪಂದದ ತಂತ್ರಗಾರಿಕೆಯನ್ನು ಹೇಳಿತ್ತು. ಇದು ಗೆಲುವಿಗೆ ಕಾರಣವಾಗಿದೆ ಎಂದಿದ್ದಾರೆ.