ಮೂಡಾ ಹಗರಣದಲ್ಲಿ ಹೋರಾಟಕ್ಕಿಳಿದಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ಮಹಿಳೆ ದೂರು..!
ಮೈಸೂರು: ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿ, ಹೋರಾಟಕ್ಕೆ ಇಳಿದಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ಇದೀಗ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ನೇಹಮಯಿ ಕೃಷ್ಣ ಅವರು ತನ್ನ ಮೇಲೆ ಅಟ್ಯಾಕ್ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆ ನೀಡಿದ ದೂರಿನಲ್ಲಿ, ನನ್ನ ಗಂಡ ಹಾರ್ಟ್ ಅಟ್ಯಾಕ್ ನಿಂದ ನಿಧನ ಹೊಂದಿದ್ದಾರೆ. ಡೆತ್ ಬೆನಿಫಿಸರಿ ಹಾಣ ಹಾಗೂ ನನ್ನ ಒಡವೆಗಳನ್ನು ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. 18/7/2024 ರಂದು ಕೋರ್ಟ್ ಮುಗಿಸಿಕೊಂಡು ನಾನು ಮತ್ತು ನನ್ನ ತಾಯಿ ಬರುತ್ತಿದ್ದವು. ನನ್ನ ಅತ್ತೆ, ಮಾವ, ಅತ್ತೆ ಸಹೋದರನ ಪರವಾಗಿ ಸ್ನೇಹಮಯಿ ಕೃಷ್ಣ ಕಿರುಕುಳ ನೀಡಿದ್ದಾರೆ. ನನ್ನ ಹಿಡಿದು ಎಳೆದಾಡಿ, ನನಗೆ, ನನ್ನ ತಾಯಿಗೆ ಜೀವ ಬೆದರಿಕೆ ಹಾಕಿದ್ದಾರಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ಲಾವಣ್ಯ ಎಂಬ ಮಹಿಳೆ ದೂರು ನೀಡಿದ್ದಾರೆ.
ಈ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ನೇಹಮಯಿ ಕೃಷ್ಣ, ಆ ಮಹಿಳೆ ಯಾರೆಂಬುದೇ ನನಗೆ ಗೊತ್ತಿಲ್ಲ. ನನ್ನ ಮೇಲಿನ ಆರೋಪ ಸುಳ್ಳು. ನನ್ನ ವಿರುದ್ಧ ಹಲವರು ಷಡ್ಯಂತ್ರ ಮಾಡುತ್ತಿದ್ದಾರೆ. ನಾನು ಜೈಲಿಗೆ ಹೋದರು ಸರಿ, ಹೋರಾಟ ನಿಲ್ಲಿಸಲ್ಲ. ಅಲ್ಲಿಂದಾನೇ ಹೋರಾಟ ಮಾಡುತ್ತೇನೆ. ಆ ದಿನ ನಾನು ಮೈಸೂರಿನಲ್ಲಿಯೇ ಇದ್ದೆ. ಬೇಕಾದರೆ ಟವರ್ ಲೊಕೇಶನ್, ಸಿಸಿಟಿವಿ ಎಲ್ಲವನ್ನು ಪರಿಶೀಲನೆ ಮಾಡಲಿ. ಮೂಡಾ ಹಗರಣದಲ್ಲಿ ಭಾಗಿಯಾಗಿರುವವರೆಲ್ಲಾ ಒಟ್ಟಿಗೆ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.